ಬೆಂಗಳೂರು: ಇಂದು ‘ರೆಬೆಲ್ ಸ್ಟಾರ್’ ಅಂಬರೀಶ್ ಅವರ 11ನೇ ದಿನದ ಪುಣ್ಯತಿಥಿ. ಈ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಗೆ ಅವರ ಪುತ್ರ ಅಭಿಷೇಕ್ ಹಾಗೂ ಸುಮಲತಾ ಪೂಜೆ ಸಲ್ಲಿಸಿದ್ದಾರೆ. ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ.
ಈಗಾಗಲೇ ಕುಟುಂಬ ಕಂಠೀರವ ಸ್ಟುಡಿಯೋಗೆ ತೆರಳಿದೆ. ಅಲ್ಲಿ ಪೂಜೆ ಸಲ್ಲಿಸಿದ ನಂತರ ಪ್ಯಾಲೇಸ್ ರೋಡ್ ನಲ್ಲಿರುವ ಪ್ರೇಸ್ಟೀಜ್ ಅಪಾರ್ಟ್ ಮೆಂಟ್ ನಿವಾಸದಲ್ಲಿ ಪೂಜಾಕಾರ್ಯ ನಡೆಯಲಿದೆ. ಮನೆಯಲ್ಲಿ ನಡೆಯುವ ಕಾರ್ಯಕ್ಕೆ ಸಿನಿಮಾ ಗಣ್ಯರು ಹಾಗೂ ಆಪ್ತರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶವಿದೆ.
ಅಭಿಮಾನಿಗಳಿಗೆ ಕಂಠೀರವದ ಬಳಿ ಊಟದ ವ್ಯವಸ್ಥೆ ಮಾಡಲಾಗಿದೆ. 15 ಕೌಂಟರ್ಗಳಲ್ಲಿ ಊಟ ನೀಡಲು ಸಿದ್ಧತೆ ಮಾಡಲಾಗುತ್ತಿದೆ. ಅಲ್ಲದೆ, ಅಭಿಮಾನಿಗಳಿಗೆ ಪೂಜೆ ನೋಡಲು ಅವಕಾಶ ಮಾಡಿಕೊಡಲಾಗಿದೆ. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇರುವುದರಿಂದ ಭದ್ರತೆಗಾಗಿ 300ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಕಂಠೀರವ ಸ್ಟುಡಿಯೋಗೆ ಕೆಲವರು ಕೇಶಮುಂಡನ ಮಾಡಿಕೊಂಡು ಬಂದಿರುವುದು ವಿಶೇಷ.
ಇನ್ನು, ಡಿಸೆಂಬರ್ 5ರಂದು ಅಭಿಮಾನಿಗಳ ಸಮ್ಮುಖದಲ್ಲಿ ವೈಕುಂಠ ಸಮಾರಾಧನೆ ನಡೆಯಲಿದೆ. ಬೆಂಗಳೂರಿನ ಫ್ಯಾಲೆಸ್ ಗ್ರೌಂಡ್ ವೈಟ್ ಪೆಟಲ್ಸ್ನಲ್ಲಿ ವೈಕುಂಠ ಸಮಾರಾಧನೆ ಕಾರ್ಯ ನೆರವೇರಲಿದೆ. ಈ ವೇಳೆ ಅಭಿಮಾನಿಗಳಿಗೋಸ್ಕರ ಊಟದ ವ್ಯವಸ್ಥೆ ಮಾಡಲಾಗಿದೆ. ನವೆಂಬರ್ 24ರಂದು ಅಂಬರೀಶ್ ಕೊನೆಯುಸಿರೆಳೆದಿದ್ದರು. ಕಂಠೀರವ ಸ್ಟುಡಿಯೋದಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಅಂಬಿ ಅಸ್ತಿಯನ್ನು ಕಾವೇರಿ ಹಾಗೂ ಗಂಗಾ ನದಿಯಲ್ಲಿ ಬಿಡಲಾಗಿದೆ.