ವಿದೇಶಿ ಮಾದರಿಯ ಹೈಟೆಕ್ ಕ್ರೀಡಾಂಗಣ : ಆರ್.ಆಶೋಕ್

ಬೆಂಗಳೂರು,ಡಿ.3-ಗಣೇಶಮಂದಿರ ವಾರ್ಡ್‍ನಲ್ಲಿ ವಿದೇಶಿ ಮಾದರಿಯ ಹೈಟೆಕ್ ಕ್ರೀಡಾಂಗಣ ನಿರ್ಮಾಣಗೊಳ್ಳುತ್ತಿದ್ದು, ಈ ಭಾಗದ ಮಕ್ಕಳ ಕ್ರೀಡಾ ಚಟುವಟಿಕೆಗೆ ಸಹಕಾರಿಯಾಗಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಆರ್.ಅಶೋಕ್ ಇಂದಿಲ್ಲಿ ತಿಳಿಸಿದರು.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಣೇಶಮಂದಿರ ವಾರ್ಡ್‍ನ ಬನಗಿರಿ ನಗರ ಹೈಟೆಕ್ ಕ್ರೀಡಾಂಗಣಕ್ಕೆ ಗುದ್ದಲಿ ಪೂಜೆ, ಶುದ್ದ ಕುಡಿಯುವ ನೀರಿನ ಘಟಕ ಹಾಗೂ ಈ-ಟಾಯ್ಲೆಟ್ ಉದ್ಘಾಟಿಸಿ ಅವರು ಮಾತನಾಡಿದರು.

ಈ ವಾರ್ಡ್‍ನಲ್ಲಿ ಎಲ್ಲಾ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪರಿಸರ ಮತ್ತು ಆರೋಗ್ಯ ಉತ್ತಮವಾಗಿರಬೇಕಾದರೆ ಹಾಗೂ ಮಕ್ಕಳು ಮತ್ತು ವಯಸ್ಕರಿಗೆ ಜೀವನದಲ್ಲಿ ಕ್ರೀಡಾಚಟುವಟಿಕೆಗಳು ಅಗತ್ಯ ಎಂದರು.

ವೈದ್ಯರು ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಜಾಗಿಂಗ್, ವಾಕಿಂಗ್ ಕಡ್ಡಾಯ ಎನ್ನುತ್ತಾರೆ. ಹೀಗಾಗಿ ಬನಗಿರಿ ನಗರದಲ್ಲಿ ವಿದೇಶಿ ಮಾದರಿಯಲ್ಲಿ ಆಧುನಿಕ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಆದಷ್ಟು ಶೀಘ್ರ ಕ್ರೀಡಾಂಗಣವನ್ನು ಲೋಕಾರ್ಪಣೆ ಮಾಡಲಿದ್ದೇವೆ ಎಂದರು.

ಕ್ರೀಡಾಂಗಣದಲ್ಲಿ ಕಬ್ಬಡಿ, ವಾಕಿಂಗ್ ಟ್ರಾಕ್, ಟೆನ್ನಿಸ್, ವಾಲಿಬಾಲ್, ಬಾಸ್ಕೆಟ್‍ಬಾಲ್ ಮತ್ತಿತರ ಕ್ರೀಡೆಗಳಿಗೆ ಅತ್ಯಾಧುನಿಕ ಅಂಗಣಗಳನ್ನು ನಿರ್ಮಿಸಲಾಗುವುದು. ಹಾಗಾಗಿ ಈ ಭಾಗದ ಮಕ್ಕಳು ತಮ್ಮ ಕ್ರೀಡಾಚಟುವಟಿಕೆಗಳಿಗೆ ಬೇರೆ ಪ್ರದೇಶಗಳಿಗೆ ಹೋಗುವುದು ತಪ್ಪುತ್ತದೆ ಎಂದು ಅಶೋಕ್ ಹೇಳಿದರು.

ಬಿಬಿಎಂಪಿ ಸದಸ್ಯೆ ಲಕ್ಷ್ಮಿ ಉಮೇಶ್ ಮಾತನಾಡಿ, ವಿದ್ಯಾವಂತರನ್ನು ಹೊಂದಿರುವ ಗಣೇಶಮಂದಿರ ವಾರ್ಡ್‍ನ ನಾಗರಿಕರ ಹಿತದೃಷ್ಟಿಯಿಂದ ಸಂಘ ಸಂಸ್ಥೆಗಳ ಸೂಚನೆ ಮೇರೆಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅಧಿಕಾರಕ್ಕೆ ಬರುವ ಮುನ್ನ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ನಾವು ಸಫಲರಾಗಿದ್ದೇವೆ ಎಂದರು.
ಬಿಜೆಪಿ ಮುಖಂಡ ಕಬ್ಬಾಳು ಉಮೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ