ಜನಪ್ರತಿನಿಧಿಗಳು ಮಾಡುವ ಸಾಧನೆಗಳನ್ನು ಜನತೆಗೆ ತಲುಪಿಸುವಲ್ಲಿ ಆಪ್ತಸಹಾಯಕರ ಪಾತ್ರ ಬಹು ಮುಖ್ಯ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ

ಬೆಂಗಳೂರು,ಡಿ.3- ಜನಪ್ರತಿನಿಧಿಗಳು ತಮ್ಮ ಅಧಿಕಾರಾವಧಿಯಲ್ಲಿ ಮಾಡುವ ಸಾಧನೆಗಳನ್ನು ಸಾರ್ವಜನಿಕರಿಗೆ ತಿಳಿಸುವಲ್ಲಿ ಆಪ್ತ ಸಹಾಯಕರ ಪಾತ್ರ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ್ ಜಿಗಜಿಣಗಿ ಹೇಳಿದ್ದಾರೆ.
ದಕ್ಷಿಣ ರಾಜ್ಯಗಳ ಬಿಜೆಪಿ ಶಾಸಕರು ಹಾಗೂ ಸಂಸತ್ ಸದಸ್ಯರುಗಳ ಆಪ್ತ ಸಹಾಯಕರಿಗೆ ಹಮ್ಮಿಕೊಳ್ಳಲಾಗಿರುವ ಪ್ರಶಿಕ್ಷಣ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಜನಪ್ರತಿನಿಧಿಗಳ ಏಳುಬೀಳುಗಳಲ್ಲಿ ಆಪ್ತ ಸಹಾಯಕರ ಪಾತ್ರ ಪ್ರಮುಖವಾದದ್ದು ಎಂದರು.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ.ಜನದನ್, ಬೇಟಿ ಬಚಾವೋ ಬೇಟಿ ಪಡ್ತಾವೋ, ಉಚಿತ ಗ್ಯಾಸ್ ಸಂಪರ್ಕ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆ ಸೃಷ್ಟಿಯಾಗಿದೆ. ಇದನ್ನು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಆಪ್ತ ಸಹಾಯಕರು ಮುಂದಾಗಬೇಕೆಂದು ಹೇಳಿದರು.

ಜನರು ಸಮಸ್ಯೆಗಳನ್ನು ಹೊತ್ತು ಬಂದಾಗ ಆಪ್ತ ಸಹಾಯಕರು ಸಹನೆ ಮತ್ತು ಸಮಾಧಾನದಿಂದ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಹೊಣೆಗಾರಿಕೆ ನಿಮ್ಮದು. ಸಂಸದರು ಮತ್ತು ಶಾಸಕರು ಸಂಬಂಧಪಟ್ಟವರಿಗೆ ಹೇಳಬಹುದು.ಉಳಿದಿದ್ದನ್ನು ನೀವು ನಿರ್ವಹಿಸಿದರೆ ಅದರ ಯಶಸ್ಸು ಪಕ್ಷಕ್ಕೆ ಸಲ್ಲುತ್ತದೆ ಎಂದು ತಿಳಿಸಿದರು.
ನಿಮ್ಮ ನಡವಳಿಕೆಗಳ ಮೇಲೆ ಪ್ರತಿಪಕ್ಷಗಳು ಹದ್ದಿನ ಕಣ್ಣಿಟ್ಟಿರುತ್ತಾರೆ. ಒಂದೊಂದು ಹೆಜ್ಜೆಯನ್ನೂ ಸಹ ಅವಲೋಕನ ಮಾಡುತ್ತಾರೆ.ಹೀಗಾಗಿ ನೀವು ಕೂಡ ಯಾವುದೇ ವಿವಾದಕ್ಕೆ ಒಳಗಾಗದೆ ಎಚ್ಚರದಿಂದಿರಬೇಕೆಂದು ಸಲಹೆ ಮಾಡಿದರು.

ಬಿಜೆಪಿ ಹಿರಿಯ ಮುಖಂಡ ರಾಮಚಂದ್ರೇಗೌಡ ಮಾತನಾಡಿ, ಸಂಸದರು ಹಾಗೂ ಶಾಸಕರ ಆಪ್ತ ಸಹಾಯಕರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುವ ಮನೋಭಾವನೆ ಇಟ್ಟುಕೊಳ್ಳಬೇಕು.ಲಾಭಕ್ಕಾಗಿ ಕೆಲಸ ಮಾಡುವುದರಿಂದ ಯಾವುದೇ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ.
ಜನ ಸಂಘದ ಆಧಾರ ಸ್ತಂಭವಾಗಿದ್ದ ಶ್ಯಾಮ್‍ಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯ, ಬಿಜೆಪಿಯ ಮುಖಂಡರಾದ ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಅನೇಕರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದಿದ್ದರಿಂದ ಪಕ್ಷದಲ್ಲಿ ಬಹುದೊಡ್ಡ ನಾಯಕರಾಗಿ ಬೆಳೆಯಲು ಸಾಧ್ಯವಾಯಿತು. ಅದೇ ರೀತಿ ಆಪ್ತ ಸಹಾಯಕರು ಕೆಲಸ ಮಾಡುವಂತೆ ನಿರ್ದೇಶಿಸಿದರು.

ಬಿಜೆಪಿ ಕೇಂದ್ರೀಯ ಪ್ರಶಿಕ್ಷಣ ಪ್ರಕೋಷ್ಟದ ಸದಸ್ಯ ರವೀಂದ್ರ ಸಾಠೇ ಮಾತನಾಡಿ, ಬಿಜೆಪಿ ಇಂದು ದೇಶವ್ಯಾಪಿ ಅಧಿಕಾರ ಹಿಡಿಯಲು ಕಾರ್ಯಕರ್ತರ ಪರಿಶ್ರಮವೇ ಪ್ರಮುಖ ಕಾರಣ. ಕೆಲವೇ ರಾಜ್ಯಗಳಿಗೆ ಸೀಮಿತವಾಗಿದ್ದ ನಮ್ಮ ಪಕ್ಷ ಕೇಂದ್ರ ಹಾಗೂ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಆಡಳಿತ ನಡೆಸುತ್ತದೆ.
ನಮ್ಮದು ಕಾರ್ಯಕರ್ತರ ಆಧಾರಿತ ಪಕ್ಷವೇ ಹೊರತು ನಾಯಕರ ಪಕ್ಷವಲ್ಲ. ಆಪ್ತ ಸಹಾಯಕರು, ಪ್ರತಿದಿನ ಜನರ ಜೊತೆ ಸಂಪರ್ಕ ಬೆಳೆಸಿಕೊಂಡು ಕ್ಷೇತ್ರದಲ್ಲಿ ಜನಪ್ರತಿನಿಧಿಗಳು ಮಾಡಿರುವ ಸಾಧನೆಗಳನ್ನು ಮನವರಿಕೆ ಮಾಡಿಕೊಡಬೇಕು.

ವಿಶೇಷವಾಗಿ ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ಟ್ವಿಟರ್, ವಾಟ್ಸಪ್ ಮೂಲಕ ಕ್ಷೇತ್ರದ ಕೆಲಸ ಕಾರ್ಯಗಳನ್ನು ಕ್ಷಣ ಕ್ಷಣಕ್ಕೂ ಬಿತರಿಸಬೇಕೆಂದು ಸಲಹೆ ಮಾಡಿದರು.

ಆಪ್ತ ಸಹಾಯಕರಿಗೆ ಎರಡು ದಿನಗಳ ಕಾಲ ನಡೆಯಲಿರುವ ದಕ್ಷಿಣ ರಾಜ್ಯಗಳ ಬಿಜೆಪಿ ಆಪ್ತ ಸಹಾಯಕರ ಶಿಬಿರದಲ್ಲಿ ನಾಳೆ ಸಮಾರೋಪ ಸಮಾರಂಭ ನಡೆಯಲಿದೆ. ವಿಧಾನಸೌಧ ಪ್ರತಿಪಕ್ಷದ ಉಪನಾಯಕ ಗೋವಿಂದ ಕಾರಜೋಳ, ವಿಧಾನಪರಿಷತ್ ಪ್ರತಿ ಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಸೇರಿದಂತೆ ಮತ್ತಿತರರು ಆಶಯ ನುಡಿಗಳನ್ನಾಡಲಿದ್ದಾರೆ.
ಶಿಬಿರದಲ್ಲಿ ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‍ಕುಮಾರ್, ಕಾರ್ಯದರ್ಶಿ ಜಗದೀಶ್ ಹಿರೇಮನಿ, ಕಾರ್ಯಕಾರಿ ಸಮಿತಿ ಸದಸ್ಯ ಮಧುಶ್ರೀ ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ