ಮೋದಿ ಹಾದಿಯಲ್ಲಿ ಕ್ಸಿ: ಚೀನಾಗಾಗಿ ಮೋದಿ ಮಾದರಿಯಲ್ಲಿ ಯೋಜನೆ ಘೋಷಣೆ

ಬೀಜಿಂಗ್: ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಪ್ರಧಾನಿ ನರೇಂದ್ರ ಮೋದಿ ಹಾದಿಯಲ್ಲಿ ನಡೆದಿದ್ದು, ಪ್ರಧಾನಿ ಮೋದಿ ಘೋಷಿಸಿರುವ ಮಾದರಿಯ ಯೋಜನೆಯನ್ನೇ ಚೀನಾದಲ್ಲೂ ಘೋಷಣೆ ಮಾಡಿದ್ದಾರೆ.

ಪ್ರಮುಖವಾಗಿ ಗ್ರಾಮೀಣ ಭಾಗಗಳಿಗೆ ಉಪಯೋಗವಾಗುವಂತಹ ಮೋದಿ ಮಾದರಿಯ ಯೋಜನೆಯನ್ನು ಚೀನಾ ಅಧ್ಯಕ್ಷರು ಘೋಷಣೆ ಮಾಡಿದ್ದು ವಿಶ್ವದ ಗಮನ ಸೆಳೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತದ ಮೂಲಕ ಸಾಮಾಜಿಕ ಕ್ರಾಂತಿಯನ್ನುಂಟುಮಾಡುವ ಯೋಜನೆಯನ್ನು ಘೋಷಿಸಿದ್ದರು. ಈಗ ಚೀನಾ ಅಧ್ಯಕ್ಷರೂ ಸಹ ಇದೇ ಮಾದರಿಯ ಯೋಜನೆಯನ್ನು ಚೀನಾದಲ್ಲಿ ಘೋಷಿಸಿದ್ದು, 2015 ರಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ರೀತಿಯಲ್ಲಿ ಶೌಚಾಲಯ ಕ್ರಾಂತಿಗಾಗಿ ಘೋಷಿಸಿದ್ದ ಯೋಜನೆಯನ್ನು ಈಗ ಗ್ರಾಮೀಣ ಮಟ್ಟಕ್ಕೂ ವಿಸ್ತರಿಸುವುದಕ್ಕೆ ಕ್ಸೀ ಜಿನ್ಪಿಂಗ್ ಯೋಜನೆ ಘೋಷಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯ ಸ್ವಚ್ಛ ಭಾರತದ ಮಾದರಿಯಲ್ಲೇ ಸ್ವಚ್ಛ ಚೀನಾ ಯೋಜನೆಯ ಕನಸು ಹೊಂದಿರುವ ಕ್ಸೀ ಜಿನ್ಪಿಂಗ್ “ಶೌಚಾಲಯದ ವಿಷಯ ಸಣ್ಣದಲ್ಲ. ನಾಗರಿಕಯುತವಾದ ಗ್ರಾಮೀಣ ಪ್ರದೇಶಗಳನ್ನು ನಿರ್ಮಿಸುವುದಕ್ಕೆ ಶೌಚಾಲಯ ಮಹತ್ವದ ಪಾತ್ರ ನಿರ್ವಹಿಸುತ್ತದೆ, ಜನತೆಯ ಜೀವನ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಈ ಅಂಶಗಳ ಬಗ್ಗೆ ಗಮನ ಹರಿಸಬೇಕಿದೆ” ಎಂದು ಕ್ಸೀ ಜಿನ್ಪಿಂಗ್ ಹೇಳಿದ್ದಾರೆ.

ದೇವಾಲಯಗಳಿಗಿಂತ ಮೊದಲು ಶೌಚಾಲಯ ನಿರ್ಮಾಣವಾಗಬೇಕು ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತಕ್ಕೆ ಅಡಿಪಾಯ ಹಾಕಿದ್ದರು. ಈಗ ಕ್ಸೀ ಜಿನ್ ಪಿಂಗ್ ಸಹ ಇದೇ ಮಾದರಿಯ ಯೋಜನೆಯನ್ನು ಚೀನಾದಲ್ಲೂ ಘೋಷಣೆ ಮಾಡಿದ್ದು, ಅಲ್ಲಿನ ಗ್ರಾಮೀಣ ಭಾಗಕ್ಕೆ ಭೇಟಿ ನೀಡಿದಾಗ ಶೌಚಾಲಯಗಳ ನಿರ್ಮಾಣದ ಬಗ್ಗೆ ವಿಶೇಷವಾಗಿ ಮಾಹಿತಿ ಪಡೆದಿದ್ದಾರೆ.

ಪ್ರವಾಸಿ ತಾಣಗಳಲ್ಲಿ ಚೀನಾ ಅಕ್ಟೋಬರ್ ತಿಂಗಳಲ್ಲಿ ಬರೊಬ್ಬರಿ 68,000 ಶೌಚಾಲಯಗಳನ್ನು ನಿರ್ಮಾಣ ಅಥವಾ ಆಧುನೀಕರಣ ಮಾಡಿತ್ತು. ಇದು ಕ್ಸೀ ಜಿನ್ಪಿಂಗ್ ಅವರು ನಿಗದಿಪಡಿಸಿದ್ದ ಗುರಿಗಿಂತ ಶೇ.19.3 ರಷ್ಟು ಹೆಚ್ಚಿನದ್ದಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ