ಬೆಂಗಳೂರು,ಡಿ.1-ನವೋದ್ಯಮ ಸ್ಥಾಪಿಸಲು ಯುವ ಜನಾಂಗದಲ್ಲಿ ವಿಶ್ವಾಸ ನಿರ್ಮಾಣಕ್ಕೆ ಮುಂದಾಗುವಂತೆ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಒಕ್ಕೂಟ(ಎಫ್ಕೆಸಿಸಿಐ)ಕ್ಕೆ ಸಲಹೆ ಮಾಡಿರುವ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ದಿಮೆಶೀಲತಾ ಸಚಿವ ಅನಂತಕುಮಾರ್ ಹೆಗಡೆ ಇದಕ್ಕೆ ಅಗತ್ಯವಾದ ತರಬೇತಿ ನೀಡುವಂತೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ನಡೆದ ಎಫ್ಕೆಸಿಸಿಐ ಯೂತ್ ಇಂಡಿಯಾ ಯೋಜನೆ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಯುವಜನರ ಜ್ಞಾನ ಮತ್ತು ಕೌಶಲ್ಯ ಉನ್ನತೀಕರಣಕ್ಕಾಗಿ ಜಾರಿಗೊಳಿಸಲಾದ ಈ ಯೋಜನೆಯನ್ನು ಅವರು ಪ್ರಶಂಸಿಸಿದರು.
ಕೇವಲ ಸರ್ಕಾರದ ಯೋಜನೆಗಳ ಮೇಲೆ ಅವಲಂಬಿತರಾಗದೆ ನವೋದ್ಯಮವನ್ನು ಸ್ಥಾಪಿಸಲು ಯುವ ಜನಾಂಗ ಮುಂದೆ ಬರಬೇಕು. ಇಚ್ಛಾಶಕ್ತಿ, ಆತ್ಮವಿಶ್ವಾಸ, ಧೈರ್ಯ ಮತ್ತು ಪೂರ್ವ ಯೋಜನೆ ನವೋದ್ಯಮ ಸ್ಥಾಪಿಸುವುದಕ್ಕೆ ಬಹುಮುಖ್ಯ.ಈ ನಿಟ್ಟಿನಲ್ಲಿ ಯುವ ಜನಾಂಗಕ್ಕೆ ಎಫ್ಕೆಸಿಸಿಐ ಸಹಕಾರ ಮತ್ತು ಬೆಂಬಲ ನೀಡಬೇಕೆಂದು ಅವರು ಕೋರಿದರು.
ಎಫ್ಕೆಸಿಸಿಐ ಬೆಂಗಳೂರಿನಲ್ಲಿ ಆಸಿಯಾನ್ ರೀತಿಯ ಸಮಾವೇಶ ನಡೆಸುತ್ತಿರುವುದು ಸ್ವಾಗತಾರ್ಹ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಹೆಗಡೆ, ವಿದೇಶಗಳಿಂದ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಜೊತೆಗೆ ಕರ್ನಾಟಕದ ಹೂಡಿಕೆದಾರರಿಗೂ ಸೂಕ್ತ ಪ್ರೋತ್ಸಾಹ ನೀಡಬೇಕೆಂದು ಸಲಹೆ ಮಾಡಿದರು.
ಯಶಸ್ವಿ ಉದ್ಯಮಿಯಾಗಲು ಕೇವಲ ಶಿಕ್ಷಣ ಮಾನದಂಡವಲ್ಲ. ಸ್ವಯಂ ಸ್ಫೂರ್ತಿ, ಪರಿಶ್ರಮ ಇದಕ್ಕೆ ಮುಖ್ಯ.ಈ ನಿಟ್ಟಿನಲ್ಲಿ ನಾಲ್ಕನೇ ತಲೆಮಾರಿನ ವಾಣಿಜ್ಯ ವ್ಯವಹಾರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಲು ಎಫ್ಕೆಸಿಸಿಐ ಕೈ ಜೋಡಿಸಬೇಕೆಂದು ಕರೆ ನೀಡಿದರು.
ಎಫ್ಕೆಸಿಸಿಐ ಅಧ್ಯಕ್ಷ ಸುಧಾಕರ್.ಎಸ್.ಶೆಟ್ಟಿ ಮಾತನಾಡಿ, ಪ್ರಸ್ತುತ ಉದ್ಯಮದ ಗುಣಮಟ್ಟಕ್ಕೆ ಅಗತ್ಯವಾಗಿ ಯುವ ಜನಾಂಗಕ್ಕೆ ಜ್ಞಾನ ಮತ್ತು ಕೌಶಲ್ಯವನ್ನು ಮೇಲ್ದರ್ಜೆಗೇರಿಸಲು ಯುವ ಭಾರತ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದರು.
ಮುಂದಿನ ವರ್ಷ ಫೆಬ್ರವರಿ ಮತ್ತು ಮಾರ್ಚ್ನಲ್ಲಿ ಆಸಿಯಾನ್ ಮಾದರಿಯಲ್ಲಿ ಸಮಾವೇಶವೊಂದನ್ನು ಎಫ್ಕೆಸಿಸಿಐ ಆಯೋಜಿಸಲಿದೆ.ಏಷ್ಯ ಸೇರಿದಂತೆ ವಿವಿಧ ಪ್ರಾಂತ್ಯಗಳ 23 ದೇಶಗಳು ಭಾಗವಹಿಸಲಿವೆ ಎಂದು ಅವರು ಹೇಳಿದರು.