ಪ್ರಶ್ನೆಪತ್ರಿಕೆ ಸೋರಿಕೆ ಕಿಂಗ್ಪಿನ್ ಶಿವಕುಮಾರನಿಂದ ಆಘಾತಕಾರಿ ವಿಷಯ ಬಯಲಿಗೆ

ಬೆಂಗಳೂರು,ಡಿ.1-ಪೊಲೀಸ್ ಕಾನ್‍ಸ್ಟೆಬಲ್ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಕೆಲವು ಆಘಾತಕಾರಿ ವಿಷಯಗಳನ್ನು ಕಿಂಗ್‍ಪಿನ್ ಶಿವಕುಮಾರ್ ಹೊರಹಾಕಿದ್ದಾನೆ.

ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳು ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಕೆಲವು ಇಲಾಖೆಯ ಅಧಿಕಾರಿಗಳು ಮತ್ತು ಕರ್ನಾಟಕ ಲೋಕಸೇವಾ ಆಯೋಗದ ಕೆಲವು ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಎಂದು ಬಾಯ್ಬಿಟ್ಟಿದ್ದಾನೆ.

ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಅಧಿಕಾರಿಗಳು ಕಳೆದ ಐದು ದಿನಗಳಿಂದ ಶಿವಕುಮಾರ್‍ನನ್ನು ತೀವ್ರ ವಿಚಾರಣೆ ನಡೆಸಿದಾಗ ಸ್ಫೋಟಕ ಮಾಹಿತಿಯನ್ನು ಹೊರ ಹಾಕಿರುವುದಾಗಿ ತಿಳಿದುಬಂದಿದೆ.

ಅಧಿಕಾರಿಗಳ ನಿರ್ದೇಶನದಂತೆಯೇ ನಾನು ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿದ್ದೆ.ಒಂದೊಂದು ಪತ್ರಿಕೆಗೆ ಇಂತಿಷ್ಟು ಹಣ ಎಂದು ನಿಗದಿ ಮಾಡಲಾಗಿತ್ತು. ಬಂದ ಹಣವನ್ನು ಎಲ್ಲರೂ ಹಂಚಿಕೊಳ್ಳುತ್ತಿದ್ದೆವು ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ ಎನ್ನಲಾಗಿದೆ.

ಈ ಹಿಂದೆ ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆಗೆ ಕರ್ನಾಟಕ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡ(ಎಸ್‍ಟಿಎಫ್)ದಲ್ಲಿದ್ದ ಹಿರಿಯ ಅಧಿಕಾರಿಯೊಬ್ಬರು ಶಾಮೀಲಾಗಿದ್ದಾರೆ.

ಪ್ರಸ್ತುತ ಸೇವೆಯಿಂದ ನಿವೃತ್ತರಾಗಿರುವ ಅವರು ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿದ್ದರು ಎಂಬುದನ್ನು ಕೇಳಿ ಖುದ್ದು ಸಿಸಿಬಿ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ.

ಹಲವು ವರ್ಷಗಳಿಂದ ಸೋರಿಕೆ:
ಕೇವಲ ಎಸ್ಸೆಸ್ಸೆಲ್ಸಿ , ಪಿಯುಸಿ ಪ್ರಶ್ನೆಪತ್ರಿಕೆಯಲ್ಲದೆ ಕಳೆದ ಹಲವು ವರ್ಷಗಳಿಂದ ಕೆಪಿಎಸ್ಸಿ ಮೂಲಕ ನಡೆಯುತ್ತಿದ್ದ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದೆವು. ಒಂದೊಂದು ಪತ್ರಿಕೆಗೆ 75ರಿಂದ 1 ಲಕ್ಷದವರೆಗೂ ಮಾರಾಟ ಮಾಡಿದ್ದಾಗಿ ಹೇಳಿದ್ದಾನೆ.
ಅಧಿಕಾರಿಗಳ ಬೆಂಬಲವಿಲ್ಲದೆ ಯಾವುದೇ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಲು ಸಾಧ್ಯವೇ ಇಲ್ಲ. ಇಲಾಖೆಯಲ್ಲಿರುವವರೇ ಮಧ್ಯವರ್ತಿಗಳನ್ನು ಸಂಪರ್ಕಿಸಿ ಇಲಾಖೆಯ ಪರೀಕ್ಷೆಗೆ ತಕ್ಕಂತೆ ಹಣವನ್ನು ನಿಗದಿ ಮಾಡುತ್ತಾರೆ.ಉನ್ನತ ಅಧಿಕಾರಿಗಳ ಕುಮ್ಮಕ್ಕೇ ಇದಕ್ಕೆಲ್ಲ ಕಾರಣ ಎಂಬ ಕಟುಸತ್ಯವನ್ನು ಹೊರ ಹಾಕಿದ್ದಾನೆಂದು ತಿಳಿದುಬಂದಿದೆ.

ಈಗಾಗಲೇ ಸಿಸಿಬಿ ವಶದಲ್ಲಿರುವ ಶಿವಕುಮಾರ್‍ನನ್ನು ಪೆÇಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದು, ಇನ್ನೂ ಇದರಲ್ಲಿ ಯಾರ್ಯಾರು ಶಾಮೀಲಾಗಿದ್ದಾರೆ ಎಂಬುದರ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ