ಬೆಂಗಳೂರು, ಡಿ.1- ವಿವಿಧ ಕ್ಷೇತ್ರಗಳ ತಜ್ಞರನ್ನೊಳಗೊಂಡ ವಾರ್ಡ್ ಕಮಿಟಿ ರಚಿಸಿ ಈ ಮೂಲಕ ವಾರ್ಡ್ಗಳ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕೆಂದು ಹೈಕೋರ್ಟ್ ನೀಡಿದ್ದ ಕಟ್ಟಪ್ಪಣೆಯನ್ನು ಬಿಬಿಎಂಪಿ ಸದಸ್ಯರು ಕೇರ್ ಮಾಡಿಲ್ಲ.
ನಗರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ವಾರ್ಡ್ ಕಮಿಟಿ ರಚಿಸಬೇಕು.ನಗರದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿ ಪರಿಹಾರೋಪಾಯಗಳನ್ನು ಸ್ಥಳೀಯ ಮಟ್ಟದಲ್ಲೇ ಕಂಡುಕೊಳ್ಳಬೇಕು ಎಂದು ಹೈಕೋರ್ಟ್ ಆದೇಶ ನೀಡಿತ್ತು.
ಆದರೆ, ಬಿಬಿಎಂಪಿ ಬಹುತೇಕ ಕಡೆ ವಾರ್ಡ್ ಕಮಿಟಿಗಳನ್ನೇ ರಚನೆ ಮಾಡಿಲ್ಲ. ಇಂದು ಎಲ್ಲ ಕಡೆ ವಾರ್ಡ್ ಸಮಿತಿ ಸಭೆ ನಡೆಸಬೇಕೆಂದು ಹೈಕೋರ್ಟ್ ನೀಡಿದ್ದ ಸೂಚನೆ ಹಿನ್ನೆಲೆಯಲ್ಲಿ ಮೇಯರ್ ಗಂಗಾಂಬಿಕೆ ಸೇರಿದಂತೆ ಬೆರಳೆಣಿಕೆ ಸದಸ್ಯರು ಕಾಟಾಚಾರಕ್ಕೆ ವಾರ್ಡ್ ಕಮಿಟಿ ಸಭೆ ಮಾಡಿದ್ದಾರೆ. ಬಹುತೇಕ ಸದಸ್ಯರು ಸಭೆ ಮಾಡಿಲ್ಲ.
ವಿವಿಧ ಕ್ಷೇತ್ರಗಳ ತಜ್ಞರು, ಚಿಂತಕರು, ಬದ್ಧತೆಯುಳ್ಳವರು, ಸಾಮಾಜಿಕ ಕಳಕಳಿ ಇರುವವರನ್ನು ಸೇರಿಸಿಕೊಂಡು ವಾರ್ಡ್ ಕಮಿಟಿ ರಚಿಸಬೇಕು.ಆದರೆ, ಪ್ರಸ್ತುತ ರಚನೆಯಾಗಿರುವ ವಾರ್ಡ್ ಕಮಿಟಿಯಲ್ಲಿ ಸ್ಥಳೀಯ ಶಾಸಕರು, ಬಿಬಿಎಂಪಿ ಸದಸ್ಯರ ಹಿಂಬಾಲಕರು, ರಾಜಕೀಯ ಪಕ್ಷಗಳವರೇ ಹೆಚ್ಚಾಗಿದ್ದಾರೆ.ಇದು ಅಭಿವೃದ್ಧಿ ಕೆಲಸಗಳಿಗೆ ತೊಡಕಾಗುತ್ತದೆ.
ತಜ್ಞರನ್ನೊಳಗೊಂಡ ವಾರ್ಡ್ ಕಮಿಟಿಯನ್ನು ರಚಿಸಿದರೆ ಪಾಲಿಕೆ ಸದಸ್ಯರಿಗೆ ಕೆಲಸವಿಲ್ಲದಂತಾಗುತ್ತದೆ. ಅವರು ಹೇಳಿದ್ದನ್ನೇ ಕೇಳಿಕೊಂಡು ಕೂರಬೇಕಾಗುತ್ತದೆ.ತಜ್ಞರ ಸಲಹೆಯಾಧಾರಿತ ಕೆಲಸಗಳನ್ನು ಮಾಡುತ್ತಿದ್ದರೆ ಸದಸ್ಯರಿಗೆ ಪ್ರಯೋಜನವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ವಾರ್ಡ್ ಕಮಿಟಿ ರಚನೆ ಮಾಡಲು, ಮಾಡಿರುವ ವಾರ್ಡ್ ಕಮಿಟಿ ಸಭೆ ನಡೆಸಲು ಸದಸ್ಯರು ಮುಂದಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ವಾರ್ಡ್ ಸಮಿತಿ ಮೂಲಕ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವ ಮಹತ್ವಾಕಾಂಕ್ಷೆ ಯೋಜನೆಗೆ ಎಳ್ಳು-ನೀರು ಬಿಡುವ ಎಲ್ಲ ಲಕ್ಷಣಗಳೂ ಗೋಚರವಾಗುತ್ತಿವೆ. ಹೈಕೋರ್ಟ್ ಆದೇಶಕ್ಕೂ ಬೆಲೆ ಇಲ್ಲದಂತಾಗಿದೆ