ಮುಂದಿನ ವರ್ಷದ ಪ್ರವೇಶಾತಿ ಪ್ರಕ್ರಿಯೆ ಆರಂಬಿಸಿದ ಖಾಸಗಿ ಶಾಲೆಗಳು

ಬೆಂಗಳೂರು, ಡಿ.1- ಕೂಸು ಹುಟ್ಟೋಕೂ ಮುನ್ನ ಕುಲಾವಿ ಹೊಲಿಸಿದರು ಎಂಬ ಗಾದೆಯಂತೆ ಪ್ರಸಕ್ತ ಶೈಕ್ಷಣಿಕ ವರ್ಷದ ಅವಧಿ ಮುಗಿಯುವ ಮುನ್ನವೇ ಖಾಸಗಿ ಶಾಲೆಗಳಲ್ಲಿ ಮುಂದಿನ ವರ್ಷದ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಖಾಸಗಿ ಶಾಲೆಗಳಲ್ಲಿ 2019-20ನೇ ಸಾಲಿನ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದ್ದು, ಈಗಾಗಲೇ ಪ್ರತಿಷ್ಠಿತ ಶಾಲೆಗಳಲ್ಲಿ ಸೀಟು ಭರ್ತಿಯಾಗಿದೆ.

ಕರ್ನಾಟಕ ಶಿಕ್ಷಣ ಕಾಯ್ದೆ ಹಾಗೂ ಕರ್ನಾಟಕ ಶೈಕ್ಷಣಿಕ ಸಂಸ್ಥೆ ತಿದ್ದುಪಡಿ ಕಾಯ್ದೆ 2018ರ ಪ್ರಕಾರ ಶೈಕ್ಷಣಿಕ ಅವಧಿ ಮುಗಿಯುವ ಮುನ್ನ ಸರ್ಕಾರಿ, ಖಾಸಗಿ, ಅನುದಾನ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳು ಸೇರಿದಂತೆ ಯಾವುದೇ ಶಾಲೆಗಳು ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸುವಂತಿಲ್ಲ.
ವಿದ್ಯಾರ್ಥಿಗಳ ಪರೀಕ್ಷಾ ಅವಧಿ ಅಂದರೆ ಮಾರ್ಚ್, ಏಪ್ರಿಲ್ ತಿಂಗಳು ಮುಗಿದ ನಂತರವೇ ಬೇಸಿಗೆ ರಜೆಯ ಸಮಯವಾದ ಏಪ್ರಿಲ್- ಮೇ ತಿಂಗಳ ಮಧ್ಯಭಾಗದಲ್ಲಿ ಪ್ರವೇಶಾತಿಯನ್ನು ನಡೆಸಬೇಕೆಂಬ ನಿಯಮವಿದೆ.

ಒಂದು ವೇಳೆ ಯಾರಾದರೂ ಮಧ್ಯ ಅವಧಿಯಲ್ಲಿ ಪ್ರವೇಶ ಮಾಡಿಕೊಂಡಿರುವುದು ಕಂಡುಬಂದರೆ ಅಂಥ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದು ಅಂದರೆ ದಂಡ ಇಲ್ಲವೇ ಶಾಲಾ ಮಾನ್ಯತೆಯನ್ನೇ ರದ್ದುಪಡಿಸಬೇಕೆಂಬ ನಿಯಮ ಕಾಯ್ದೆಯಲ್ಲಿದೆ.
ಆದರೆ ಕಾಯ್ದೆ ಕೇವಲ ಕಾಗದಕ್ಕೆ ಸೀಮಿತವಾಗಿದೆ ಹೊರತು ಈವರೆಗೂ ಯಾವುದೇ ಶಾಲೆಗಳ ವಿರುದ್ಧ ಸರ್ಕಾರವಾಗಲೀ, ಸಾರ್ವಜನಿಕ ಶಿಕ್ಷಣ ಇಲಾಖೆಯಾಗಲಿ ಒಂದೇ ಒಂದು ಕ್ರಮವನ್ನು ಜರುಗಿಸಿರುವ ನಿದರ್ಶನಗಳಿಲ್ಲ.

ಆಗಲೇ ಪ್ರವೇಶಾತಿ ಪೂರ್ಣ:
ಈಗಾಗಲೇ ರಾಜ್ಯದ ಕೆಲವು ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಪೂರ್ವ ನರ್ಸರಿ(ಎಲ್ ಕೆಜಿ, ಯುಕೆಜಿ)ಯ ಪ್ರವೇಶಾತಿಗಳನ್ನು ಪೂರ್ಣಗೊಳಿಸಲಾಗಿದೆ.
ಸುಮಾರು 50 ಸಾವಿರದಿಂದ ಮೂರುವರೆ ಲಕ್ಷದವರೆಗೂ ಪ್ರವೇಶಕ್ಕೆ ಹಣ ಪಡೆಯಲಾಗಿದೆ.ಪೆÇೀಷಕರು ಕೂಡ ತಮ್ಮ ಮಕ್ಕಳಿಗೆ ಇಂಥದ್ದೇ ಶಾಲೆಗಳಿಗೆ ಸೀಟು ಕೊಡಿಸಬೇಕೆಂಬ ಪ್ರತಿಷ್ಠೆಗೆ ಬಿದ್ದು, ಆಡಳಿತ ಮಂಡಳಿ ಕೇಳಿದಷ್ಟು ಹಣವನ್ನು ನೀಡುತ್ತಿದ್ದಾರೆ.

ಒಂದು ಬಾರಿ ಶಾಲೆಯಲ್ಲಿ ಅರ್ಜಿ ತೆಗೆದುಕೊಂಡು ಶುಲ್ಕ ನೀಡಿದರೆ ಮುಗಿಯಿತು.ಯಾವ ಕಾರಣಕ್ಕೂ ಪುನಃ ಆ ಹಣವನ್ನು ಹಿಂದಿರುಗಿಸುವುದಿಲ್ಲ ಎಂಬ ಷರತ್ತು ಕೂಡ ವಿಧಿಸಲಾಗಿದೆ. ಇದು ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲದೆ ರಾಜ್ಯದ 2ನೇ ಹಂತದ ಮಹಾನಗರಗಳೆನಿಸಿದ ಮೈಸೂರು, ಮಂಗಳೂರು, ತುಮಕೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ , ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ಎಲ್ಲೆಡೆ ಖಾಸಗಿ ಶಾಲೆಗಳಲ್ಲಿ ಇದು ವ್ಯವಸ್ಥಿತವಾಗಿ ನಡೆಯುತ್ತಲೇ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ