ನವದೆಹಲಿ: ಸಾಲ ಮನ್ನಾ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಆಗ್ರಹ ಸೇರಿದಂತೆ ತಮ್ಮ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಿನ್ನೆಯಿಂದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆ ಈಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರಕ್ಕೆ ಅಗ್ನಿ ಪರೀಕ್ಷೆಯಾಗಿದೆ.
ರೈತರ ಈ ಬೃಹತ್ ರ್ಯಾಲಿಗೆ 21ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಹಾಗೂ 200ಕ್ಕೂ ಹೆಚ್ಚು ರೈತ ಮತ್ತು ಕಾರ್ಮಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಲಕ್ಷಾಂತರ ರೈತರು ಬಿಗಿಪಟ್ಟು ಹಿಡಿದಿರುವುದರಿಂದ ಇದು ಮೋದಿ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ರೈತರ ಅಖಂಡ ಶಕ್ತಿ ಪ್ರದರ್ಶನದಿಂದ ಕೇಂದ್ರ ಸರ್ಕಾರ ತಬ್ಬಿಬ್ಬಾಗಿದ್ದು, ಪೂರಕ ನಿರ್ಧಾರ ಕೈಗೊಳ್ಳುವ ತ್ತಡಕ್ಕೆ ಸಿಲುಕಿದೆ.
ಪಂಚ ರಾಜ್ಯಗಳ ಚುನಾವಣೆಯಲ್ಲಿ ರಾಜಸ್ತಾನ ಮತ್ತು ತೆಲಂಗಾಣ ರಾಜ್ಯಗಳಿಗೆ ವಿಧಾನಸಭೆ ಚುನಾವಣೆಗಳು ನಡೆಯಬೇಕಿದ್ದು, ರೈತರ ಹಿತಾಸಕ್ತಿಗೆ ಪೂರಕವಾಗುವಂಥ ನಿರ್ಧಾರವನ್ನು ತೆUದುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರವಿದೆ. ಕೃಷಿಕರ ಹಿತಕ್ಕೆ ವಿರುದ್ಧವಾದ ಯಾವುದೇ ತೀರ್ಮಾನ ಚುನಾವಣಾ ಫಲಿತಾಂಶದ ಮೇಲೆ ದುಷ್ಪರಿಣಾಮ ಬೀರಲಿದೆ.
ಈಗಾಗಲೇ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಈ ರ್ಯಾಲಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಅನೇಕ ಅಗ್ರನಾಯಕರು ಈ ರ್ಯಾಲಿಗೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಕಿಸಾನ್ ಮುಕ್ತಿ ಮೋರ್ಚಾ ರ್ಯಾಲಿಗೆ ದೇಶದ ಬಹುತೇಕ ಎಲ್ಲ ರಾಜ್ಯಗಳಿಂದ ಸಹಸ್ರ ಸಂಖ್ಯೆಯಲ್ಲಿ ನೆರೆದಿರುವ ರೈತರು ರಾಮ್ಲೀಲಾ ಮೈದಾನದಲ್ಲಿ ಸಂಸತ್ ಚಲೋ ಪಾದಯಾತ್ರೆ ನಡೆಸುತ್ತಿದ್ದಾರೆ. ಅಸಂಖ್ಯಾತ ರೈತರು ಮತ್ತು ಕೃಷಿ ಕಾರ್ಮಿಕರು ಪ್ರವಾಹೋಪಾದಿಯಲ್ಲಿ ಸಾಗುತ್ತಿರುವುದರಿಂದ ರಾಜಧಾನಿಯ ಬಹುತೇಕ ಪ್ರದೇಶಗಳಲ್ಲಿ ಸಂಚಾರ ವ್ಯವಸ್ಥೆ ತೀವ್ರ ಅಸ್ತವ್ಯಸ್ಥಗೊಂಡಿದೆ.
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಪಶ್ಚಿಮಬಂಗಾಳ, ಉತ್ತರಪ್ರದೇಶ, ರಾಜಸ್ತಾನ, ಪಂಜಾಬ್, ಹರಿಯಾಣ, ಹಾಗೂ ಇತರ ರಾಜ್ಯಗಳ ರೈತರು ಕಿಸಾನ್ ಮುಕ್ತಿ ಮೋರ್ಚಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳ ರೈತರು ಟ್ರ್ಯಾಕ್ಟರ್ಗಳಲ್ಲಿ ಆಗಮಿಸಿದ್ದಾರೆ.
ಕಿಸಾನ್ ರ್ಯಾಲಿ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
Farmers protest,Congress president Rahul Gandhi,Aam Aadmi Party (AAP) chief Arvind Kejriwal