ಜೈಪುರ: ಭಜರಂಗಬಲಿ ಹನುಮಂತನನ್ನು ದಲಿತ ಎಂದು ಉಲ್ಲೇಖಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ರಾಜಸ್ಥಾನದ ಬಲಪಂಥೀಯ ಗುಂಪೊಂದು ಲೀಗಲ್ ನೋಟಿಸ್ ನೀಡಿದ್ದು, ಮೂರು ದಿನಗಳ ಒಳಗೆ ಕ್ಷಮೆ ಕೋರುವಂತೆ ಆಗ್ರಹಿಸಿದೆ.
ರಾಜಸ್ಥಾನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಅಲ್ವಾರ್ ಜಿಲ್ಲೆಯ ಮಾಳಖೇಡದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಸಿಎಂ ಯೋಗಿ, ಹನುಮಂತ ಒಬ್ಬ ಅರಣ್ಯ ನಿವಾಸಿಯಾಗಿದ್ದು, ಎಲ್ಲಾ ಭಾರತೀಯ ಸಮುದಾಯಗಳನ್ನು ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಸಂಪರ್ಕಿಸಲು ಕೆಲಸ ಮಾಡಿದ ಒಬ್ಬ ದಲಿತ ಎಂದು ಹೇಳಿದ್ದರು.
ರಾಮನ ಆಶಯದಂತೆ ಎಲ್ಲರನ್ನು ಒಂದುಗೂಡಿಸುವುದು ಹನುಮಂತನ ನಿರ್ಧಾರವಾಗಿತ್ತು. ಅವನಂತೆಯೇ ರಾಮನ ಆಶಯವನ್ನು ಪೂರೈಸುವ ತನಕ ನಾವು ವಿಶ್ರಾಂತಿಯನ್ನು ಪಡೆಯಬಾರದು ಎಂದು ಹೇಳಿದ್ದರು.
ಹನುಮಂತ ದಲಿತ ಎಂಬ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ರಾಜಸ್ಥಾನದ ಸರ್ವ ಬಾಹ್ಮಣ ಮಹಾಸಭಾದ ಅಧ್ಯಕ್ಷ ಸುರೇಶ್ ಮಿಶ್ರಾ ಅವರು ಸಿಎಂ ಯೋಗಿ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಅಲ್ಲದೆ, ಡಿಸೆಂಬರ್ 7 ರಂದು ನಡೆಯುವ ಚುನಾವಣೆಗೆ ಮತದಾರರನ್ನು ಸೆಳೆಯಲು ಯೋಗಿ ಅವರು ಹನುಮಂತನ ಜಾತಿಯನ್ನು ಎಳೆದು ತಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಯೋಗಿ ಅವರ ಹೇಳಿಕೆ ಅನೇಕ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ. ರಾಜಕೀಯ ಲಾಭಕ್ಕಾಗಿ ಹನುಮಂತನ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
Yogi Adityanath,Bajrangbali,Hanumanji,Dalit