ವಿಷ್ಣುವರ್ಧನ್ ಸ್ಮಾರಕದ ಬಗ್ಗೆ ಯಾವುದೇ ಗೊಂದಲ ಬೇಡ ಸಿ.ಎಂ

ಬೆಂಗಳೂರು, ನ.29- ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿವಾದಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳು ಹಾಗೂ ಕುಟುಂಬದವರ ಹಗ್ಗ-ಜಗ್ಗಾಟದ ನಡುವೆಯೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಮಾರಕ ನಿರ್ಮಾಣ ಕುರಿತಂತೆ ಯಾವುದೇ ಗೊಂದಲ ಬೇಡ.ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಟ್ವಿಟ್ ಮಾಡಿರುವ ಸಿಎಂ, ಡಾ.ರಾಜ್‍ಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಷ್‍ರಂತಹ ಮಹನೀಯರನ್ನು ಸ್ಮರಿಸುವ ವಿಚಾರದಲ್ಲಿ ನಾನು ಬದ್ಧನಿದ್ದೇನೆ. ವಿಷ್ಣುವರ್ಧನ್ ಅವರ ಸ್ಮಾರಕ ಕುರಿತ ವಿಚಾರದಲ್ಲಿ ಗೊಂದಲ ಬೇಡ. ಸದ್ಯದಲ್ಲೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಶೀಘ್ರ ಸ್ಮಾರಕ ನಿರ್ಮಾಣದ ಬಗ್ಗೆ ತೀರ್ಮಾನಿಸುತ್ತೇನೆ ಎಂದು ಹೇಳಿದ್ದಾರೆ.

ಕಳೆದೆರಡು ದಿನಗಳಿಂದ ವಿಷ್ಣುವರ್ಧನ್ ಸ್ಮಾರಕ ಕುರಿತ ವಿವಾದ ಮತ್ತೆ ಸದ್ದುಮಾಡುತ್ತಿದ್ದು, ಒಂದೆಡೆ ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರು ಪ್ರಸ್ತುತ ವಿಷ್ಣುವರ್ಧನ್ ಅವರ ಸಮಾಧಿ ನಿರ್ಮಿಸಿರುವ ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕ ನಿರ್ಮಿಸಲು ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಮುಖ್ಯಮಂತ್ರಿಗಳನ್ನು ನಟ ಕಿಚ್ಚ ಸುದೀಪ್ ನೇತೃತ್ವದಲ್ಲಿ ಭೇಟಿ ಮಾಡಿ ಮನವಿ ಮಾಡಲು ನಿರ್ಧರಿಸಿದ್ದಾರೆ.

ಇತ್ತ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಒಂಭತ್ತು ವರ್ಷಗಳ ಕಾಲ ವಿಷ್ಣುವರ್ಧನ್ ಸ್ಮಾರಕಕ್ಕಾಗಿ ಹೋರಾಡಿದ್ದೇವೆ. ಮೈಸೂರಿನಲ್ಲೇ ಜಾಗ ಕೊಡಿ ಎಂದು ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ.
ಈ ಗೊಂದಲಗಳ ನಡುವೆ ಅಭಿಮಾನಿಯೊಬ್ಬರು ಕೆಆರ್‍ಎಸ್ ಸಮೀಪ 10್ಡ080 ಅಳತೆಯ ಜಾಗವನ್ನು ವಿಷ್ಣು ಸ್ಮಾರಕಕ್ಕಾಗಿ ನೀಡಲು ಮುಂದೆ ಬಂದಿದ್ದು, ನಟ ಬಿ.ಸಿ.ಪಾಟೀಲ್ ಸಹ ಈ ಬಗ್ಗೆ ದನಿ ಎತ್ತಿ ವಿಷ್ಣು ಸ್ಮಾರಕ ನಿರ್ಮಾಣ ಕುರಿತ ವಿವಾದ ಬಗೆಹರಿಸಿ ಒಂದು ನೆಲೆ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಟ್ವಿಟ್ ಮಾಡಿದ್ದು, ವಿಷ್ಣು ಸ್ಮಾರಕ ನಿರ್ಮಾಣ ಸಂಬಂಧ ಉದ್ಭವಿಸಿರುವ ಗೊಂದಲವನ್ನು ಯಾವ ರೀತಿ ಬಗೆಹರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ