ಪ್ರತಿಷ್ಠಿತ ಶಾಲಾ-ಕಾಲೇಜುಗಳಿಗೆ ಸಡ್ಡು ಹೊಡಯಲಿರುವ ಪಾಲಿಕೆಯ ಶಾಲಾ-ಕಾಲೇಜುಗಳು

ಬೆಂಗಳೂರು, ನ.29- ಇನ್ನು ಕೆಲವೇ ದಿನಗಳಲ್ಲಿ ನಗರದ ಪ್ರತಿಷ್ಠಿತ ಶಾಲಾ-ಕಾಲೇಜುಗಳಿಗೆ ಪಾಲಿಕೆಯ ಶಾಲಾ-ಕಾಲೇಜುಗಳು ಸಡ್ಡು ಹೊಡೆಯಲಿವೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.

ಪಾಲಿಕೆ ಶಾಲೆಗಳನ್ನು ಅಭಿವೃದ್ಧಿಪಡಿಸಿ ಆಧುನಿಕ ಟಚ್ ನೀಡಲು ಮೈಕ್ರೋಸಾಫ್ಟ್ ಸಂಸ್ಥೆ ತಂದಿರುವ ಬಿಬಿಎಂಪಿ ರೋಷಿನಿ ಯೋಜನೆ ಬಗ್ಗೆ ಸದಸ್ಯೆ ಲತಾಕುವರ್ ರಾಥೋಡ್ ಅವರು ರೋಷಿನಿ ಪ್ರಾತ್ಯಕ್ಷಿಕೆ ನೀಡಿದರು.

ಮೈಕ್ರೋಸಾಫ್ಟ್ ಸಂಸ್ಥೆ ಬಿಬಿಎಂಪಿ ವ್ಯಾಪ್ತಿಯ ಶಾಲಾ-ಕಾಲೇಜುಗಳಲ್ಲಿ ರೋಷಿನಿ ಯೋಜನೆಯನ್ನು ಜಾರಿ ಮಾಡುತ್ತಿದೆ.ಇದಕ್ಕಾಗಿ 500 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದು ಲತಾಕುವರ್ ಹೇಳಿದರು.
ಈ ವೇಳೆ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಸೇರಿದಂತೆ ಹಲವು ಸದಸ್ಯರು ರೋಷಿನಿ ಯೋಜನೆಯ ಹಣವನ್ನು ಶಾಲೆಗಳ ಹೆಂಚುಗಳ ಬದಲಾವಣೆ ಮಾಡಲು ಬಳಸಬೇಕೆಂದು ಮನವಿ ಮಾಡಿದರು.

ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, ರೋಷಿನಿ ಯೋಜನೆ ಒಳ್ಳೆಯದು.ಆದರೆ, ಶಿಕ್ಷಕರಿಗೆ ಸರಿಯಾಗಿ ವೇತನ ಸಿಗುತ್ತಿಲ್ಲ. ಪೌರ ಕಾರ್ಮಿಕರಿಗೆ ಸಿಗುವಷ್ಟೂ ವೇತನ ಅವರಿಗೆ ಸಿಗುತ್ತಿಲ್ಲ. ಹಾಗಾಗಿ ವೇತನ ಪರಿಷ್ಕರಣೆ ಮಾಡಿ ಎಂದು ಒತ್ತಾಯಿಸಿದರು.
ಆಗ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಮಧ್ಯಪ್ರವೇಶಿಸಿ, ನಿಮ್ಮ ಅಧಿಕಾರಾವಧಿಯಲ್ಲಿ ಪೌರ ಕಾರ್ಮಿಕರಿಗೆ 4 ಸಾವಿರ ವೇತನ ಇತ್ತು.ನಾವು ಬಂದ ಮೇಲೆ 17 ಸಾವಿರ ಮಾಡಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಸದಸ್ಯರೊಬ್ಬರು ರೋಷಿನಿ ಎಂಬ ಹೆಸರೇಕೆ ಇಟ್ಟಿದ್ದೀರ, ಕನ್ನಡದಲ್ಲಿ ಹೆಸರಿಡಿ ಎಂದು ಸಲಹೆ ನೀಡಿದರು.
ಆಗ ಮೇಯರ್ ಗಂಗಾಂಬಿಕೆ ಪ್ರತಿಕ್ರಿಯಿಸಿ, ರೋಷಿನಿ ಎಂದರೆ ಆಶಾಕಿರಣ ಎಂದರ್ಥ. ಹೆಸರು ಯಾವುದಾದರೇನು ಪಾಲಿಕೆಯ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಆಗುವುದು ಮುಖ್ಯ ಎಂದು ಹೇಳಿದರು.

ಮೈಕ್ರೋಸಾಫ್ಟ್ ಸಂಸ್ಥೆಯ ಪ್ರತಿನಿಧಿ ಅನಿಸೇಠ್ ಪ್ರತಿಕ್ರಿಯಿಸಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಗೆ ತಂದಿರುವ ಈ ರೋಷಿನಿ ಯೋಜನೆಯನ್ನು ವಿಶ್ವದ ಯಾವುದೇ ಭಾಗದಲ್ಲೂ ಜಾರಿಮಾಡಿಲ್ಲ. ನಮ್ಮ ಸಂಸ್ಥೆಯ ಪ್ರಯತ್ನಕ್ಕೆ ಅಮೆರಿಕ ಪ್ರಶಂಸಿಸಿ ಪ್ರಶಸ್ತಿ ನೀಡಿದೆ.ಈ ಯೋಜನೆ ಯಶಸ್ವಿಯಾಗಲು ನಿಮ್ಮೆಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದರು.

ಕಾಲ ಬದಲಾದಂತೆ ಶಿಕ್ಷಣ ಕೂಡ ಬದಲಾಗುತ್ತಿದೆ.ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಬೇಕಾದರೆ ಮೊದಲು ಶಿಕ್ಷಕರನ್ನು ಪರಿಣಿತರನ್ನಾಗಿ ಮಾಡಬೇಕು.ನಾವು ಈಗಾಗಲೇ ಇಲ್ಲಿನ ಶಿಕ್ಷಕರಿಗೆ ತರಬೇತಿ ನೀಡಿದ್ದೇವೆ. ಹಾಗಾಗಿ ಭವಿಷ್ಯದಲ್ಲಿ ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲೂ ಪ್ರತಿಷ್ಠಿತ ಶಾಲಾ-ಕಾಲೇಜುಗಳಂತೆ ಶಿಕ್ಷಣ ದೊರೆಯಲಿದೆ ಎಂದು ಹೇಳಿದರು.

ಮೇಯರ್ ಮಾತನಾಡಿ, ರೋಷಿನಿ ಯೋಜನೆ ಅದ್ಬುತವಾದುದು.ಪಾಲಿಕೆಯ ಶಾಲಾ-ಕಾಲೇಜುಗಳಲ್ಲಿ ಇದು ಯಶಸ್ವಿಯಾದರೆ ಹಿಂದೆ ಪಾಲಿಕೆ ಶಾಲೆಗಳೆಂದರೆ ಮೂಗು ಮುರಿಯುತ್ತಿದ್ದವರು ಮುಂದೆ ಪಾಲಿಕೆ ಶಾಲೆಗಳಿಗೆ ಸೇರಿಸಲು ಶಿಫಾರಸು ಪಡೆದು ಬರಬೇಕಾಗುತ್ತದೆ.ನಮ್ಮ ಶಾಲಾ-ಕಾಲೇಜುಗಳು ಪ್ರತಿಷ್ಠಿತ ಶಾಲಾ-ಕಾಲೇಜುಗಳಿಗೆ ಸಡ್ಡು ಹೊಡೆಯುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ