ರಜನಿ ನಟಿಸಿರುವ ತಮಿಳು ಚಿತ್ರ ವಿರೋಧಿಸಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್

ಬೆಂಗಳೂರು, ನ.29-ರಜನಿಕಾಂತ್ ರಚಿಸಿರುವ ತಮಿಳು ಚಿತ್ರ 2.0 ಪ್ರದರ್ಶನ ವಿರೋಧಿಸಿ ಇಂದು ಊರ್ವಶಿ ಚಿತ್ರಮಂದಿರದ ಬಳಿ ಪ್ರತಿಭಟನೆ ನಡೆಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹಾಗೂ ಮತ್ತಿತರರನ್ನು ಪೆÇಲೀಸರು ವಶಕ್ಕೆ ಪಡೆದರು.

ಬೆಂಗಳೂರಿನಲ್ಲಿ ಈ ಚಿತ್ರ ಒಂದೇ ದಿನ 950 ಪ್ರದರ್ಶನವನ್ನು ಕಾಣುತ್ತಿದೆ.ಆದರೆ, ಚೆನ್ನೈನಲ್ಲಿ 500 ಪ್ರದರ್ಶನ ಮಾತ್ರ ಕಾಣುತ್ತಿದೆ.ಯಾವುದು ಚೆನ್ನೈ, ಯಾವುದು ಬೆಂಗಳೂರು ಎಂಬುದು ಅನುಮಾನವಾಗಿದೆ.ಪರಭಾಷಾ ಚಿತ್ರಗಳ ಹಾವಳಿ ಮಿತಿಮೀರಿದೆ.ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರ ಉಡಾಫೆ ಧೋರಣೆಯಿಂದ ನಮ್ಮ ಕನ್ನಡ ಚಿತ್ರಗಳಿಗೆ ಧಕ್ಕೆ ಬಂದೊದಗಿದೆ.ಎಲ್ಲ ಚಿತ್ರಮಂದಿರಗಳು, ಮಾಲ್‍ಗಳಲ್ಲಿ ರಜನಿ ಚಿತ್ರ ಪ್ರದರ್ಶನಕ್ಕೇ ಅವಕಾಶ ನೀಡಿದರೆ ಕನ್ನಡ ಚಿತ್ರಗಳ ಗತಿ ಏನಾಗಬೇಕು.ವಾಣಿಜ್ಯ ಮಂಡಳಿಯವರು ಈ ಬಗ್ಗೆ ಯೋಚನೆ ಮಾಡಬಾರದೆ ಎಂದು ವಾಟಾಳ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಡಿಸೆಂಬರ್ 1ರೊಳಗೆ ಚಿತ್ರವನ್ನು ತೆರವುಗೊಳಿಸಿ ಕನ್ನಡ ಚಿತ್ರಗಳಿಗೆ ಅವಕಾಶ ಕಲ್ಪಿಸಬೇಕು.ಇಲ್ಲದಿದ್ದರೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಹೇಳಿದರು.

ಕನ್ನಡ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದ ಭಾರತ ಚಿತ್ರಮಂದಿರವನ್ನು ತೆರವುಗೊಳಿಸಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದೆ.ಕಪಾಲಿ, ಸ್ಟೇಟ್ಸ್ ಚಿತ್ರಮಂದಿರಗಳನ್ನು ತೆರವು ಮಾಡಲಾಗಿದೆ.ಎಲ್ಲ ಮಾಲ್‍ಗಳಲ್ಲಿ ಜನಸಾಮಾನ್ಯರ ಕೈಗೆಟುಕದಷ್ಟು ಟಿಕೆಟ್ ದರವಿದೆ. ಹೀಗಾದರೆ ಕನ್ನಡ ಚಿತ್ರಗಳ ಗತಿ ಏನು?ಇಲ್ಲಿನ ಕಲಾವಿದರು, ನಿರ್ದೇಶಕರು, ಕಾರ್ಮಿಕರು, ಅವಲಂಬಿತರು ಏನಾಗಬೇಕು?ಈ ನಿಟ್ಟಿನಲ್ಲಿ ನಮ್ಮ ನಾಡಿನ ಜನತೆ ಚಿಂತಿಸಬೇಕು.ಪರಭಾಷೆ ಚಿತ್ರಗಳ ಹಾವಳಿಯನ್ನು ತಡೆಯಬೇಕಾದ ಅಗತ್ಯವಿದೆ ಎಂದು ವಾಟಾಳ್ ಪ್ರತಿಪಾದಿಸಿದರು.

ತಮಿಳುನಾಡು, ಆಂಧ್ರ, ಕೇರಳ, ತೆಲಂಗಾಣ ಯಾವ ರಾಜ್ಯದಲ್ಲೂ ಕನ್ನಡ ಚಿತ್ರಗಳು ಪ್ರದರ್ಶನವಾಗುತ್ತಿಲ್ಲ. ಆದರೆ, ನಮ್ಮ ರಾಜ್ಯದಲ್ಲಿ ಎಲ್ಲಾ ಚಿತ್ರಗಳಿಗೂ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಹೀಗಾಗಿ ನಮ್ಮ ಕನ್ನಡ ಚಿತ್ರೋದ್ಯಮಕ್ಕೆ ಧಕ್ಕೆ ಬಂದೊದಗಿದೆ.ಇದನ್ನು ಕೂಡಲೇ ಸರಿಪಡಿಸಬೇಕು.ಇಲ್ಲದಿದ್ದರೆ ನಮ್ಮ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ