ಬೆಂಗಳೂರು,ನ.29-ರಾಜ್ಯೋತ್ಸವ ಪ್ರಶಸ್ತಿಗೆ ಪ್ರಮುಖ ಕ್ಷೇತ್ರಗಳಾದ ಸುಗಮ ಸಂಗೀತ, ಹಿಂದೂಸ್ಥಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಸೇರಿದಂತೆ ವಿವಿಧ ಸಂಗೀತ ಕ್ಷೇತ್ರಗಳಲ್ಲಿನ ಪ್ರಮುಖರ ಆಯ್ಕೆಯಲ್ಲಿ ಕಡೆಗಣಿಸಲಾಗಿದೆ ಎಂದು ಸಂಗೀತ ಕಲಾವಿದರ ವೇದಿಕೆ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಾಯಕ ವೈ.ಕೆ.ಮುದ್ದುಕೃಷ್ಣ , ಈ ಬಾರಿಯ ರಾಜ್ಯೋತ್ಸವ ಪಟ್ಟಿಯಲ್ಲಿ ಸಂಗೀತ ಕ್ಷೇತ್ರದ ಹಲವು ಪ್ರಮುಖರನ್ನು ಗುರುತಿಸದೆ ಇರುವುದು ವಿಷಾದಕರ ಎಂದು ಹೇಳಿದರು.
ಶಾಸ್ತ್ರೀಯ ಸಂಗೀತ, ಗಮಕ, ಹಿಂದೂಸ್ಥಾನಿ ಸಂಗೀತ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಲವರು ಇದ್ದರೂ ಅವರಿಗೆ ಗೌರವ ಸಲ್ಲುತ್ತಿಲ್ಲ. ಸಲಹಾ ಸಮಿತಿಗೆ ಸಂಗೀತ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಗಣ್ಯರನ್ನು ಸೇರ್ಪಡೆಗೊಳಿಸದೆ ಸಲಹೆ ಮಾರ್ಗದರ್ಶನಗಳನ್ನು ಪಡೆಯದೆ ಪ್ರಮುಖರನ್ನು ಗುರುತಿಸಲು ಸಾಧ್ಯವಾಗಿಲ್ಲ. ಇದು ಖಂಡನೀಯ ಎಂದರು.