ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾದ ಸುಲಿಗೆಕೋರನ ಮೇಲೆ ಗುಂಡು ಹಾರಿಸಿದ ಪೊಲೀಸರು

ಬೆಂಗಳೂರು,ನ.29- ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಕುಖ್ಯಾತ ಸುಲಿಗೆಕೋರನೊಬ್ಬನನ್ನು ಚಿಕ್ಕಜಾಲ ಪೆÇಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಆರ್‍ಟಿನಗರದ ನಿವಾಸಿ ಮೊಹಮ್ಮದ್ ಅಶ್ರಫ್ ಖಾನ್ ಬಂಧಿತ ಸುಲಿಗೆಕೋರ.
ಘಟನೆ ವಿವರ: ಇಂದು ಮುಂಜಾನೆ ಚಿಕ್ಕಜಾಲ ಪೊಲೀಸ್ ಠಾಣೆ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ ಬೈಕ್‍ನಲ್ಲಿ ಬಂದ ಸುಲಿಗೆಕೋರರು ಒಟ್ಟು ಆರು ಕಡೆ ಸುಲಿಗೆ ಮಾಡಿದ್ದರು.

ಈ ತಂಡ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿ ಒಟ್ಟು ಐದು ಮೊಬೈಲ್, ಎರಡು ಬೈಕ್ ಹಾಗೂ ನಗದು ಹಣವನ್ನು ಸುಲಿಗೆ ಮಾಡಿತ್ತು.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಎರಡೂ ಠಾಣೆಗಳ ಪೊಲೀಸ್ ಇನ್‍ಸ್ಪೆಕ್ಟರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಕಾಬಂಧಿ ಹಾಕಿ ಕಾರ್ಯಾಚರಣೆ ಕೈಗೊಂಡಿದ್ದರು.
ಭಾರತಿನಗರ ಬಳಿ ಪಿಎಸ್‍ಐ ಪ್ರವೀಣ್‍ಕುಮಾರ್ ಹಾಗೂ ಸಿಬ್ಬಂದಿ ಲೋಕೇಶ್ ಅವರು ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಏರ್ ಪೊರ್ಟ್ ಕಡೆಯಿಂದ ಬಂದ ದ್ವಿಚಕ್ರ ವಾಹನ ಸವಾರನೊಬ್ಬ ಪೊಲೀಸರನ್ನು ಕಂಡೊಡನೆ ವಾಹನ ತಿರುಗಿಸಿ ಹೋಗಿದ್ದಾನೆ.

ಅನುಮಾನಗೊಂಡ ಪೊಲೀಸರು ಈ ಬೈಕ್‍ನ್ನು ಹಿಂಬಾಲಿಸಿಕೊಂಡು ಹೋಗಿದ್ದು, ವಿಐಟಿ ಕಾಲೇಜು ಬಳಿ ಸಿಬ್ಬಂದಿ ಲೋಕೇಶ್ ಅವರು ಬೈಕ್ ಸವಾರನನ್ನು ಹಿಡಿಯಲು ಯತ್ನಿಸಿದ್ದಾರೆ. ಆಗ ಆರೋಪಿ ಮೊಹಮ್ಮದ್ ಅಶ್ರಫ್ ಖಾನ್ ತನ್ನ ಬಳಿ ಇದ್ದ ಲಾಂಗ್‍ನಿಂದ ಲೋಕೇಶ್ ಅವರ ಬಲಗೈಗೆ ಹಲ್ಲೆ ಮಾಡಿದ್ದಾನೆ.

ಆಗ ಪ್ರವೀಣ್ ಕುಮಾರ್ ಅವರು ಆರೋಪಿಗೆ ಶರಣಾಗುವಂತೆ ಸೂಚಿಸಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದನ್ನು ಲೆಕ್ಕಿಸದ ಆರೋಪಿ ಮೊಹಮ್ಮದ್ ಪಿಎಸ್‍ಐ ಮೇಲೂ ಹಲ್ಲೆಗೆ ಮುಂದಾದಾಗ ಪ್ರವೀಣ್‍ಕುಮಾರ್ ಅವರು ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ಆರೋಪಿಯ ಎಡಪಾದಕ್ಕೆ ತಗುಲಿ ಕುಸಿದುಬಿದ್ದಿದ್ದಾನೆ.
ತಕ್ಷಣ ಆತನನ್ನು ಸುತ್ತುವರೆದ ಪೊಲೀಸರು ವಶಕ್ಕೆ ಪಡೆದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸುಲಿಗೆ ಮಾಡಿ ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ