ಅಧಿವೇಶನಕ್ಕೂ ಮೊದಲೇ ಸಂಪುಟ ವಿಸ್ತರಣೆ

ಬೆಂಗಳೂರು, ನ.29-ಆಕಾಂಕ್ಷಿಗಳ ಒತ್ತಡ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ.

ಡಿಸೆಂಬರ್ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆ ಮಾಡಲು ಮುಹೂರ್ತ ನಿಗದಿಯಾಗಿದೆ.ಈ ಸಂಬಂಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸಂಪುಟದಲ್ಲಿ ಖಾಲಿಯಿರುವ ಕಾಂಗ್ರೆಸ್ ಪಾಲಿನ ಆರು ಹಾಗೂ ಜೆಡಿಎಸ್ ಪಾಲಿನ 2 ಸ್ಥಾನಗಳನ್ನು ಭರ್ತಿ ಮಾಡಲು ಹಲವು ದಿನಗಳಿಂದ ಒತ್ತಾಯ ಕೇಳಿ ಬಂದಿತ್ತು.

ಹಲವಾರು ಕಾರಣಗಳಿಂದ ಸಂಪುಟ ವಿಸ್ತರಣೆಯನ್ನು ಮುಂದೂಡುತ್ತಾ ಬರಲಾಗಿತ್ತು. ಹೀಗಾಗಿ ಆಕಾಂಕ್ಷಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.ಆಕಾಂಕ್ಷಿಗಳ ಈ ಮನಸ್ಥಿತಿಯ ಲಾಭ ಪಡೆಯಲು ಪ್ರತಿಪಕ್ಷ ಬಿಜೆಪಿ ಹಲವಾರು ಬಾರಿ ಪ್ರಯತ್ನವನ್ನು ಮಾಡಿತ್ತು. ಇದೇ ರೀತಿ ಮುಂದುವರೆದರೆ ಸಮ್ಮಿಶ್ರ ಸರ್ಕಾರದಲ್ಲಿ ಭಿನ್ನಮತ ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂಬ ಹಿನ್ನೆಲೆಯಲ್ಲಿ ಉಭಯ ಪಕ್ಷದ ಮುಖಂಡರು ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳ ನೇಮಕ ಮಾಡಲು ನಿರ್ಧರಿಸಿದ್ದಾರೆ.

ಅಧಿವೇಶನ ಆರಂಭಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳ ನೇಮಕ ಮಾಡಲು ಮುಂದಾಗಿದ್ದಾರೆ.ಈ ಸಂಬಂಧ ಚರ್ಚೆ ನಡೆಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದ್ಯದಲ್ಲೇ ಸಮನ್ವಯ ಸಮಿತಿ ಸಭೆಯನ್ನೂ ಕೂಡ ಕರೆಯಲಿದ್ದಾರೆ.

ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.ಎಲ್ಲವೂ ಅಂದುಕೊಂಡಂತೆ ಆದರೆ ಡಿ.5 ರಂದು ಸಂಪುಟ ವಿಸ್ತರಣೆಯಾಗುವುದು ಖಚಿತವಾಗಿದೆ.

ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಿ ಅನುಮತಿ ಪಡೆಯಲು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಸಿದ್ದರಾಮಯ್ಯ ಅವರು ಸೂಚಿಸಿದ್ದು, ಅವರು ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಚರ್ಚಿಸಲಿದ್ದಾರೆ. ಸದ್ಯ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ, ಇನ್ನಿತರೆ ಮುಖಂಡರು ಪಂಚರಾಜ್ಯ ಚುನಾವಣೆಯ ಪ್ರಚಾರದ ಬ್ಯುಸಿಯಲ್ಲಿದ್ದು, ಅಲ್ಲಿಯವರೆಗೂ ರಾಜ್ಯ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ರೀತಿಯ ಚರ್ಚೆ ನಡೆಸುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ಅವರಿಗೆ ಬಿಡುವಾದಾಗ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳ ನೇಮಕ ಮಾಡಲು ಚರ್ಚಿಸಿ ಅನುಮತಿ ಪಡೆಯುವ ಸಾಧ್ಯತೆ ಇದೆ.
ಒಟ್ಟಾರೆ ವಿಸ್ತರಣೆ, ನಿಗಮ ಮಂಡಳಿ ನೇಮಕ ಮಾಡುವ ಎಲ್ಲಾ ಪ್ರಯತ್ನಗಳು ಆರಂಭಗೊಂಡಿದ್ದು, ಆಕಾಂಕ್ಷಿಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಅಧಿವೇಶನದ ಆರಂಭಕ್ಕೂ ಮುನ್ನ ಸಂಪುಟ ವಿಸ್ತರಣೆಯಾಗದಿದ್ದರೆ ಪ್ರತಿಪಕ್ಷ ಬಿಜೆಪಿ ಕೈಗೆ ಮತ್ತೊಂದು ಅಸ್ತ್ರ ಕೊಟ್ಟಂತಾಗುತ್ತದೆ.ಅದಕ್ಕೋಸ್ಕರ ಕಾಂಗ್ರೆಸ್-ಜೆಡಿಎಸ್ ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕ ಮಾಡುವ ಶತಪ್ರಯತ್ನ ಮಾಡುತ್ತಿವೆ.

ಮತ್ತೊಂದು ಮೂಲದ ಪ್ರಕಾರ ಅಧಿವೇಶನದ ನಂತರ ಸಚಿವ ಸಂಪುಟ ವಿಸ್ತರಣೆ ಮಾಡೋಣ ಎಂದು ವರಿಷ್ಠರು ಹೇಳಿದ್ದಾರೆ. ಅಷ್ಟರವೇಳೆಗೆ ಪಂಚರಾಜ್ಯ ಚುನಾವಣೆ ಫಲಿತಾಂಶ ಬರುತ್ತದೆ.ಅದನ್ನು ನೋಡಿಕೊಂಡು ಸಂಪುಟ ವಿಸ್ತರಣೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ಕೆಲವರು ವ್ಯಕ್ತಪಡಿಸಿದ್ದಾರೆ.
ಅರ್ಹತೆ ಇರುವವರಿಗಾದರೂ ಸಂಪುಟದಲ್ಲಿ ಸ್ಥಾನ ಸಿಗಲಿ ಎಂದು ಹೇಳಿದ್ದರು.

ಇಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಆದಷ್ಟು ಬೇಗ ಸಂಪುಟ ವಿಸ್ತರಣೆಯಾಗಲಿ. ಖಾಲಿ ಉಳಿದಿರುವ ಸ್ಥಾನಗಳನ್ನು ಭರ್ತಿ ಮಾಡಲಿ.ನನಗೆ ಸ್ಥಾನ ಸಿಗದಿದ್ದರೂ ಪರವಾಗಿಲ್ಲ. ಬೇರೆಯವರಿಗಾದರೂ ದೊರೆಯಲಿ ಎಂದು ಹೇಳುವ ಮೂಲಕ ಸಂಪುಟ ವಿಸ್ತರಣೆಗೆ ಆಗ್ರಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ