ಬೆಂಗಳೂರು, ನ.27- ಅರಸೀಕೆರೆ ತಾಲೂಕು ಶಿಶುವಾಳ ಗ್ರಾಮದ ಸುತ್ತಮುತ್ತ ಪ್ಲಾಟಿನಂ ಮತ್ತು ಚಿನ್ನದ ನಿಕ್ಷೇಪಗಳು ಪತ್ತೆಯಾಗಿರುವುದರ ಬಗ್ಗೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದವರು ಗ್ರಾಮಸ್ಥರಿಗೆ ತಿಳಿಸಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಅಧಿಕಾರಿಗಳು ಈ ಗ್ರಾಮದ ಸುತ್ತಮುತ್ತಲಿನ ಜಮೀನಿನಲ್ಲಿ ಶೋಧ ಕಾರ್ಯ ನಡೆಸುತ್ತಿದ್ದು, ರೈತರ ಆಕ್ರೋಶಕ್ಕೆ ತುತ್ತಾಗಿದ್ದರು. ರೈತರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ನಿನ್ನೆ ಈ ಭಾಗದಲ್ಲಿ ಪ್ಲಾಟಿನಂ ಮತ್ತು ಚಿನ್ನದ ನಿಕ್ಷೇಪವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನೇ ಇದ್ದರೂ ನಾವು ಈ ಭೂಮಿಯನ್ನು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಸ್ಥಳೀಯ ಶಾಸಕರಾದ ಶಿವಲಿಂಗೇಗೌಡ ಅವರು ಅಧಿಕಾರಿಗಳೊಂದಿಗೆ ಮಾತನಾಡಿ, ಸರ್ವೆ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದಾರೆ.
ಅಲ್ಲದೆ, ಈ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಪತ್ರ ಬರೆದು ಗ್ರಾಮಸ್ಥರ ಪರ ನಿಲ್ಲುವಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.
ಗ್ರಾಮಸ್ಥರ ವಿರೋಧದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸರ್ವೆ ಮಾಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.
ಅರಸೀಕೆರೆ ತಾಲೂಕಿನ ಶಿಶುವಾಳ ಗ್ರಾಮದ ಸುತ್ತಮುತ್ತ ಚಿನ್ನ ಹಾಗೂ ಪ್ಲಾಟಿನಂ ನಿಕ್ಷೇಪ ಪತ್ತೆಯಾಗಿರುವುದು ಖುಷಿಯ ವಿಚಾರವೇ. ಆದರೆ ಇದರಿಂದ ಸಾಕಷ್ಟು ರೈತರು ಜಮೀನು ಕಳೆದುಕೊಳ್ಳಬೇಕಾಗುತ್ತದೆ. ನಿಕ್ಷೇಪದಲ್ಲಿ ಚಿನ್ನ ಮತ್ತು ಪ್ಲಾಟಿನಂ ಯಾವ ಪ್ರಮಾಣದಲ್ಲಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.
ದೇಶದ ಎಲ್ಲಾ ಕಡೆ ಭೂಗೋಳಶಾಸ್ತ್ರಜ್ಞರು ಸರ್ವೆ ಮಾಡಿದಂತೆ ಇಲ್ಲಿಯೂ ಮಾಡಿದ್ದಾರೆ. ಇನ್ನೂ ಸ್ಪಷ್ಟ ಮಾಹಿತಿ ಗೊತ್ತಾಗಿಲ್ಲ.