ಪರಭಾಷಾ ಚಿತ್ರಗಳ ಹಾವಳಿ ವಿರೋಧಿಸಿ ಇದೇ 29 ರಂದು ರಜನೀಕಾಂತ್ ಅವರ 2.0 ತಮಿಳು ಚಿತ್ರ ಪ್ರದರ್ಶನ ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವತಿಯಿಂದ ಪ್ರತಿಭಟನೆ

ಬೆಂಗಳೂರು, ನ.27-ಕರ್ನಾಟಕದಲ್ಲಿ ಕನ್ನಡ ಚಿತ್ರ ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಆಗ್ರಹಿಸಿ ಹಾಗೂ ಪರಭಾಷಾ ಚಿತ್ರಗಳ ಹಾವಳಿ ವಿರೋಧಿಸಿ ಇದೇ 29 ರಂದು ರಜನೀಕಾಂತ್ ಅವರ 2.0 ತಮಿಳು ಚಿತ್ರ ಪ್ರದರ್ಶನ ಖಂಡಿಸಿ ಊರ್ವಶಿ ಚಿತ್ರಮಂದಿರದ ಮುಂದೆ ಕನ್ನಡ ಚಳವಳಿ ವಾಟಾಳ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಭಾಷಾ ಚಿತ್ರಗಳ ವಿಪರೀತ ಹಾವಳಿಯಿಂದ ಕನ್ನಡ ಚಲನಚಿತ್ರಗಳಿಗೆ ಚಿತ್ರಮಂದಿರಗಳ ಕೊರತೆ ಉಂಟಾಗಿದೆ. ತಮಿಳುನಾಡು ಸೇರಿದಂತೆ ಬೇರೆ ರಾಜ್ಯಗಳಲ್ಲಿ ಕನ್ನಡದ ಯಾವ ಚಿತ್ರಗಳು ಪ್ರದರ್ಶನವಾಗುವುದಿಲ್ಲ. ಆದರೆ ನಮ್ಮ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರು ನಗರದಲ್ಲಿ ಪರಭಾಷೆ ಚಿತ್ರಗಳ ಹಾವಳಿ ಹೆಚ್ಚಾಗಿದೆ. ಇದರಿಂದ ನಮ್ಮ ಚಲನಚಿತ್ರಗಳ ಪ್ರದರ್ಶನಕ್ಕೆ ಅಡ್ಡಿಯಾಗುತ್ತಿದೆ. ಇದನ್ನು ವಿರೋಧಿಸಿ ಈಗಾಗಲೇ ಸಾಕಷ್ಟು ಬಾರಿ ಪ್ರತಿಭಟನೆ ಕೂಡ ನಡೆಸಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ. ಕ್ರಮಕೈಗೊಳ್ಳಬೇಕಾದ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರೇ ಪರಭಾಷೆ ಚಿತ್ರಗಳ ಹಂಚಿಕೆದಾರರು ಮತ್ತು ಪ್ರದರ್ಶಕರಾಗಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೊದಲು ಪರಿಶುದ್ಧವಾಗಬೇಕು, ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳನ್ನು ಒದಗಿಸುವ ಬಗ್ಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಪರಭಾಷಾ ಚಿತ್ರಗಳ ವಿರುದ್ಧ ಕಳೆದ 50 ವರ್ಷಗಳ ಹಿಂದೆಯೇ ಹೋರಾಟ ಮಾಡಿ ಪೆÇಲೀಸರಿಂದ ಬಂಧನಕ್ಕೊಳಗಾಗಿ ಬೂಟಿನ ಏಟುಗಳನ್ನು ತಿಂದಿದ್ದೆ. ಇಡೀ ರಾಜ್ಯವೇ ಆ ಪೆÇಲೀಸ್ ಅಧಿಕಾರಿಯ ವರ್ತನೆ ಖಂಡಿಸಿದ್ದಲ್ಲದೆ, ಅಂದು ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪ ಅವರು ಆ ಅಧಿಕಾರಿಯನ್ನು ದೆಹಲಿಗೆ ವರ್ಗಾವಣೆ ಮಾಡಿದ್ದರು ಮತ್ತು ಬಂಧನಕ್ಕೊಳಗಾಗಿದ್ದ ನನ್ನನ್ನು ಬಿಡುಗಡೆಗೊಳಿಸಿದ್ದರು ಎಂದು ಸ್ಮರಿಸಿದರು.

ನಗರದಲ್ಲಿ ಕನ್ನಡ ಚಿತ್ರಗಳು ಪ್ರದರ್ಶನವಾಗುತ್ತಿದ್ದ ಚಿತ್ರಮಂದಿರಗಳನ್ನು ಒಡೆದು ಹಾಕಿ ವಾಣಿಜ್ಯ ಕಟ್ಟಡಗಳನ್ನು ಕಟ್ಟಲಾಗಿದೆ. ಭಾರತ್ ಟಾಕೀಸ್, ಸ್ಟೇಟ್ ಚಿತ್ರಮಂದಿರ ಸೇರಿದಂತೆ ಹಲವು ಥಿಯೇಟರ್‍ಗಳು ಕಣ್ಮರೆಯಾಗಿವೆ.

ಬೇರೆ ರಾಜ್ಯದಲ್ಲಿ ಕನ್ನಡ ಚಿತ್ರಗಳನ್ನು ಕಡ್ಡಾಯವಾಗಿ ಪ್ರದರ್ಶನ ಮಾಡಬೇಕು, ಹೊಸದಾಗಿ ತಯಾರಾದ ಯಾವ ಪರಭಾಷಾ ಚಿತ್ರಗಳು ಒಂದು ತಿಂಗಳು ಕರ್ನಾಟಕದಲ್ಲಿ ಪ್ರದರ್ಶನವಾಗಬಾರದು. ಒಂದು ಅಥವಾ ಎರಡು ಚಿತ್ರಮಂದಿರಗಳಲ್ಲಿ ಮಾತ್ರ ಅವಕಾಶ ನೀಡಬೇಕು. ನೂರಾರು ಥಿಯೇಟರ್‍ಗಳಲ್ಲಿ ಪ್ರದರ್ಶನ ಮಾಡಿ ಕರ್ನಾಟಕದಲ್ಲಿ ಅನ್ಯ ಭಾಷಾ ಚಿತ್ರಗಳನ್ನು ವೈಭವೀಕರಣ ಮಾಡುವುದು ಸರಿಯಲ್ಲ. ಇದೊಂದು ರೀತಿ ಪರಭಾಷಿಗರ ದರೋಡೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಇದೇ 29 ರಂದು ಇವೆಲ್ಲದರ ವಿರುದ್ಧ ಊರ್ವಶಿ ಚಿತ್ರಮಂದಿರದ ಪ್ರತಿಭಟನೆ ಕೈಗೊಂಡಿರುವುದಾಗಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ