ಬೆಂಗಳೂರು, ನ.27- ಹಿರಿಯ ನಟ ಹಾಗೂ ಮಾಜಿ ಸಚಿವ ಅಂಬರೀಶ್ ಅವರ ಅಂತ್ಯಸಂಸ್ಕಾರ ಹಾಗೂ ಮೆರವಣಿಗೆಯನ್ನು ಸುಗಮ ಹಾಗೂ ಯಶಸ್ವಿಯಾಗಿ ನಡೆಸಲು ಎಲ್ಲಾ ವ್ಯವಸ್ಥೆ ಮಾಡಿದ್ದ ರಾಜ್ಯ ಪೊಲೀಸರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿನಂದನೆ ಸಲ್ಲಿಸಿದ್ದಾರೆ.
ಪೊಲೀಸರ ಸೇವೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅಂಬರೀಶ್ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಂಡಿದ್ದರು. ಇದರಿಂದ ಅಂಬಿ ಅವರ ಪ್ರಾರ್ಥಿವ ಶರೀರದ ದರ್ಶನ ಮತ್ತು ಮೆರವಣಿಗೆ ಹಾಗು ಅಂತ್ಯಸಂಸ್ಕಾರ ಎಲ್ಲವೂ ಸುಗಮವಾಗಿ ನಡೆಯಲು ಸಾಧ್ಯವಾಯಿತು. ಇದಕ್ಕಾಗಿ ನಾನು ಪೊಲೀಸರನ್ನು ಅಭಿನಂದಿಸುತ್ತೇನೆ. ಅವರ ಕೆಲಸದಿಂದಾಗಿ ಸರ್ಕಾರಕ್ಕೂ ಒಳ್ಳೆಯ ಹೆಸರು ಬಂದಿದೆ ಎಂದು ಶ್ಲಾಘಿಸಿದ್ದಾರೆ.
ಡಿಸಿಎಂ ಶ್ಲಾಘನೆ; ಹಿರಿಯ ನಟ ಹಾಗೂ ಮಾಜಿ ಸಚಿವ ಅಂಬರೀಶ್ ಅವರ ಅಂತ್ಯಸಂಸ್ಕಾರವನ್ನು ಸುಗಮವಾಗಿ ನಡೆಸಲು ಹಗಲು-ರಾತ್ರಿ ಶ್ರಮಿಸಿದ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಗೃಹ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದರು.
ಪೊಲೀಸರು ಮೂರ್ನಾಲ್ಕು ದಿನಗಳಿಂದ ಮಾಡಿರುವ ಕೆಲಸಕಾರ್ಯ ಶ್ಲಾಘನೀಯ. ಯಾವುದೇ ಗೊಂದಲ, ಜೀವಹಾನಿಯಾಗದಂತೆ ನೋಡಿಕೊಂಡಿದ್ದಾರೆ. ಅದಕ್ಕಾಗಿ ಡಿಜಿ, ನಗರ ಪೊಲೀಸ್ ಆಯುಕ್ತರು ಸೇರಿದಂತೆ ಎಲ್ಲ ಪೊಲೀಸರಿಗೂ ಅಭಿನಂದನೆಗಳು ಎಂದರು.
ಅಂಬರೀಶ್ ಅವರ ಅಂತ್ಯಸಂಸ್ಕಾರದಲ್ಲಿ ನಟಿ ರಮ್ಯ ಪಾಲ್ಗೊಂಡಿರದ ಬಗ್ಗೆ ಮಾಹಿತಿ ಇಲ್ಲ. ವೈಯಕ್ತಿಕ ಕಾರಣಗಳಿಂದಾಗಿ ಅವರು ಗೈರು ಆಗಿರಬಹುದು ಎಂದು ಪ್ರಶೆಯೊಂದಕ್ಕೆ ಉತ್ತರಿಸಿದರು.