ನಟಿ ರಮ್ಯಾ ಅವರ ಕಾಲಿನ ಸಮಸ್ಯೆ ಹಿನ್ನೆಲೆಯಲ್ಲಿ ಅಂಬರೀಶ್ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ : ಡಿ.ಕೆ.ಶಿವಕುಮಾರ್

ಬೆಂಗಳೂರು, ನ.27- ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರ ಕಾಲಿನ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಅಂಬರೀಶ್ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮ್ಯಾ ಅವರ ಕಾಲಿನ ಸಮಸ್ಯೆ ತೀವ್ರ ಸ್ವರೂಪದ್ದಾಗಿದೆ. ಕಳೆದ 6ರಂದು ಬೆಂಗಳೂರಿಗೆ ಬರುವುದಾಗಿ ಹೇಳಿದ್ದರು. ಅದರ ಹಿಂದಿನ ದಿನವೇ ಬಿದ್ದು ಗಾಯಮಾಡಿಕೊಂಡಿದ್ದಾರೆ. ಅವರು ಓಡಾಡದಂತಹ ಪರಿಸ್ಥಿತಿ ಇರುವುದರಿಂದ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಆಗಲಿಲ್ಲ ಎಂದರು.

ಅಂಬರೀಶ್ ಅವರ ಅಂತಿಮ ಯಾತ್ರೆ ಅತ್ಯಂತ ಶಾಂತಿಯುತ ಮತ್ತು ವ್ಯವಸ್ಥಿತವಾಗಿ ನಡೆದಿರುವುದಕ್ಕೆ ರಾಜ್ಯದ ಎಲ್ಲಾ ಜನರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಸರ್ಕಾರ ಕೆಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದೆ. ಅಂಬಿಯವರ ಅಂತಿಮ ದರ್ಶನಕ್ಕೆ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗುವ ದೊಡ್ಡ ನಿರ್ಧಾರವನ್ನು ನಮ್ಮ ಸರ್ಕಾರ ಕೈಗೊಂಡಿತ್ತು. ಇಲ್ಲದೇ ಹೋದರೆ ಜನ ಏನು ಮಾಡುತ್ತಿದ್ದರೋ ಗೊತ್ತಿಲ್ಲ. ಆನಂತರ ಎಲ್ಲಾ ಪಕ್ಷದವರು, ಹೊರಗಿನಿಂದ ಬಂದವರಿಗೂ ಹಾಗೂ ಕಲಾವಿದರಿಗೂ ಅಂತಿಮ ದರ್ಶನಕ್ಕೆ ವ್ಯವಸ್ಥಿತವಾಗಿ ಅವಕಾಶ ಕಲ್ಪಿಸಲಾಗಿತ್ತು. ಕೆಲವರಿಗೆ ಅವಕಾಶ ಸಿಕ್ಕದೇ ಇದ್ದರೂ ಅಂಬಿ ಅವರ ಅಂತಿಮ ಯಾತ್ರೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಸರ್ಕಾರವಾಗಿ ನಾವು ನಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ. ವಾಯು ಸೇನೆಯವರು ಸಕಾಲಕ್ಕೆ ಹೆಲಿಕಾಫ್ಟರ್ ಒದಗಿಸಿ ಸಹಾಯ ಮಾಡಿದ್ದಾರೆ ಎಂದು ಹೇಳಿದರು.

ವಿಷ್ಣು ಸ್ಮಾರಕ ?:
ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಕಂಠೀರವ ಸ್ಟುಡಿಯೋದಲ್ಲೇ ನಿರ್ಮಿಸಬೇಕು ಎಂಬ ಬೇಡಿಕೆ ಸೃಷ್ಟಿಯಾಗಿದೆ. ಈವರೆಗೂ ಆ ಬಗ್ಗೆ ಯಾವುದೇ ಚರ್ಚೆಗಳು ನಡೆದಿರಲಿಲ್ಲ. ನಿನ್ನೆ ಅಂಬರೀಶ್ ಅವರ ಅಂತ್ಯ ಸಂಸ್ಕಾರವನ್ನು ಕಂಠೀರವ ಸ್ಟುಡಿಯೋದಲ್ಲೇ ನೆರವೇರಿಸಲಾಗಿದೆ. ವಿಷ್ಣುವರ್ಧನ್ ಅವರ ಸ್ಮಾರಕವನ್ನು ಇಲ್ಲೇ ನಿರ್ಮಿಸುವ ಬಗ್ಗೆ ಪರಿಸ್ಥಿತಿ ನೋಡಿ ಪ್ರತಿಕ್ರಿಯಿಸಲಾಗುವುದು. ಸದ್ಯಕ್ಕೆ ನಾನು ಆ ಬಗ್ಗೆ ಹೇಳಿಕೆ ನೀಡಲು ಅಧಿಕೃತ ವ್ಯಕ್ತಿ ಅಲ್ಲ ಎಂದು ಹೇಳಿದರು.

7 ಮಂದಿ ಸಸ್ಪೆಂಡ್:
ಜಲಸಂಪನ್ಮೂಲ ಇಲಾಖೆಯಿಂದ ಪಿಡಬ್ಲ್ಯೂಡಿ ಹಾಗೂ ಇತರೆ ಇಲಾಖೆಗಳಿಗೆ ಯರವಲು ಸೇವೆಯಿಂದ ಹೋಗಿದ್ದ ಇಂಜನಿಯರ್‍ಗಳನ್ನ್ನು ವಾಪಸ್ ಕರೆಸಿಕೊಳ್ಳಲಾಗುತ್ತಿದೆ. ನಮ್ಮಲ್ಲಿಗೆ ವಾಪಸ್ ಬಂದ ಇಂಜನಿಯರ್‍ಗಳಿಗೆ ಸ್ಥಳ ನಿಯೋಜನೆ ಮಾಡಿ ವರ್ಗಾವಣೆ ಮಾಡಲಾಗಿದೆ. ನಿಯೋಜಿತ ಸ್ಥಳಗಳಿಗೆ ತೆರಳದ ಆರು ಮಂದಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಒಬ್ಬ ಕಾರ್ಯನಿರ್ವಾಹಕ ಇಂಜಿನಿಯರ್ ಸೇರಿ 7 ಮಂದಿಯನ್ನು ಅಮಾನತುಗೊಳಿಸಲಾಗಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ