ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದು, ಅಧಿಕಾರಿಗಳಿಗೆ ಇದು ಸವಾಲಿನ ಜವಾಬ್ದಾರಿಯಾಗಲಿದೆ : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ನ.27- ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದು, ಮುಂದಿನ 3-4 ತಿಂಗಳು ಸಂಕಷ್ಟ ಎದುರಾಗಲಿದೆ. ಅಧಿಕಾರಿಗಳಿಗೆ ಇದು ಸವಾಲಿನ ಜವಾಬ್ದಾರಿಯಾಗಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ನಡೆದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರ ಸಂಕಷ್ಟ ನಿವಾರಿಸಲು ಅಧಿಕಾರಿಗಳು ಜವಾಬ್ದಾರಿ ಮತ್ತು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಬೇಕು. ಜನರಿಗೆ ಸಂಕಷ್ಟ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

ರಾಜ್ಯದ 100 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಕುಡಿಯುವ ನೀರು, ಜಾನುವಾರುಗಳ ಮೇವು ಕೊರತೆಯಾಗದಂತೆ ನೋಡಿಕೊಳ್ಳಬೇಕು. ಸಾಲ ಮನ್ನಾ, ಬೆಳೆ ಪರಿಹಾರ ಇವೆಲ್ಲವುಗಳ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ಪಡೆದುಕೊಂಡಿದ್ದಾರೆ. ಅವರು ತಕ್ಷಣ ಕಾರ್ಯಪ್ರವೃತ್ತರಾಗಬೇಕು. ಬರ ಪರಿಹಾರ ಕಾರ್ಯ ಕೈಗೊಳ್ಳಲು ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳನ್ನು ಕಾಯಬೇಕಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿಗಳು ತಕ್ಷಣ ಕ್ರಮಕೈಗೊಳ್ಳಬಹುದು ಎಂದು ತಿಳಿಸಿದರು.

ನರೇಗಾ ಯೋಜನೆಯಡಿ ಶೇಕಡಾ 100ರಷ್ಟು ಉದ್ಯೋಗ ಒದಗಿಸುವ ಮೂಲಕ ಜನರು ಗುಳೆ ಹೋಗುವುದನ್ನು ತಪ್ಪಿಸಬೇಕು. ಪ್ರತಿ ಗ್ರಾಮ ಪಂಚಾಯತ್‍ನಿಂದ ಮಾಹಿತಿ ಪಡೆದು ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳು ಖುದ್ದು ವೀಕ್ಷಣೆ ಮಾಡಿ ಸಮಯ ವ್ಯರ್ಥ ಮಾಡದೆ ಕೆಲಸ ಮಾಡಬೇಕು. ಮನೆ ಇಲ್ಲದವರಿಗೆ ಮನೆ ಕಟ್ಟಲು ನಿವೇಶನ ಗುರುತಿಸಬೇಕು. ಯೋಜನೆ ದುರುಪಯೋಗವಾಗದಂತೆ ಕ್ರಮಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಸೂಚನೆ ನೀಡಿದರು.

ಸರ್ಕಾರಕ್ಕೆ ಕೆಟ್ಟ ಹೆಸರು ಬಾರದಂತೆ ಕೆಲಸ ನಿರ್ವಹಿಸಬೇಕು. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಸಮ್ಮಿಶ್ರ ಸರ್ಕಾರ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡುತ್ತದೆ ಎಂದು ಭರವಸೆ ನೀಡಿದರು.

ಕಂದಾಯ ಇಲಾಖೆಯಲ್ಲಿ ಹೆಚ್ಚಿನ ಕೆಲಸ ಆಗಬೇಕು. ಆದ್ದರಿಂದ ಕಂದಾಯ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಶ್ರಮವಹಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಫೆಬ್ರವರಿ ಕೊನೆಯ ವಾರ ಅಥವಾ ಮಾರ್ಚ್‍ನಲ್ಲಿ ಲೋಕಸಭೆ ಚುನಾವಣೆಗೆ ವೇಳಾಪಟ್ಟಿ ಘೋಷಣೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಅದಕ್ಕೂ ಮೊದಲು ಹಿಂದಿನ ಸರ್ಕಾರದ ಯೋಜನೆ ಹಾಗೂ ಈ ಸರ್ಕಾರದ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಇನ್ನು ಮೂರು ತಿಂಗಳು ಆಡಳಿತಕ್ಕೆ ಹೆಚ್ಚಿನ ಚುರುಕು ನೀಡಬೇಕು ಎಂದು ಹೇಳಿದರು.

ಅಧಿಕಾರಿಗಳು ಉತ್ತಮ ಕೆಲಸ ಮಾಡಿದರೆ ಅವರಿಗೆ ಸರ್ಕಾರ ಇನ್ನಷ್ಟು ಪೆÇ್ರೀ ನೀಡುತ್ತದೆ. ಆದರೆ ನಿರ್ಲಕ್ಷ್ಯ ಹಾಗೂ ಉದಾಸೀನ ತೋರಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ ಮುಖ್ಯಮಂತ್ರಿ, ರಾಷ್ಟ್ರೀಯ ಹೆದ್ದಾರಿ ಯೋಜನೆ ಜಾರಿಗೆ ಇರುವ ಅಡೆತಡೆಗಳನ್ನು ತಕ್ಷಣ ನಿವಾರಿಸಬೇಕು. ಈ ಬಗ್ಗೆ ಈ ಹಿಂದೆ ನಡೆಸಿದ್ದ ಸಭೆಯಲ್ಲಿ ತೆಗೆದುಕೊಂಡ ಎಷ್ಟು ನಿರ್ಣಯಗಳು ಜಾರಿಯಾಗಿವೆ ಎಂಬುದರ ಬಗ್ಗೆ ವಿವರ ನೀಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಕೇಂದ್ರದಿಂದ 540 ಕೋಟಿ ರೂ. ಮಂಜೂರು

ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಪ್ರದೇಶದಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಕೇಂದ್ರ ಸರ್ಕಾರದಿಂದ 540 ಕೋಟಿ ರೂ. ಅನುದಾನ ಬಂದಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ನೆರೆ ಪೀಡಿತ ಪ್ರದೇಶದ ಪುನರ್ವಸತಿಗಾಗಿ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಅದರಂತೆ ಕೇಂದ್ರ ಸರ್ಕಾರ 540 ಕೋಟಿ ರೂ. ಮಂಜೂರು ಮಾಡಿದೆ ಎಂದು ಮಾಹಿತಿ ನೀಡಿದರು.

ಅತಿವೃಷ್ಟಿಯಿಂದ ಹಾನಿಗೊಳಗಾದ ಕೊಡಗು ಜಿಲ್ಲೆಯಲ್ಲಿ ಸಂತ್ರಸ್ತರಿಗೆ ಮನೆ ಕಟ್ಟಿ ಕೊಡಲು ನಿರ್ಧರಿಸಲಾಗಿದೆ. ಈ ಕಾರ್ಯ ಪ್ರಗತಿಯಲ್ಲಿದ್ದು, ಇನ್ನಷ್ಟು ವೇಗ ನೀಡುವ ಅಗತ್ಯವಿದೆ ಎಂದು ಹೇಳಿದರು.

ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಎಚ್.ಡಿ.ರೇವಣ್ಣ, ಆರ್.ವಿ.ದೇಶಪಾಂಡೆ, ಬಂಡೆಪ್ಪ ಕಾಶಂಪೂರ್, ಸಾ.ರಾ.ಮಹೇಶ್, ಪ್ರಿಯಾಂಕ್ ಖರ್ಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ