ಬೆಂಗಳೂರು, ನ.24-ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಶಶಿವಾಳ ಗ್ರಾಮದ ಬಳಿ ಅಮೂಲ್ಯ ನಿಕ್ಷೇಪ ಪತ್ತೆ ಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ ಸುತ್ತಮುತ್ತ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದವರು ಕಳೆದ ಎರಡು ತಿಂಗಳಿನಿಂದ ಸರ್ವೆ ನಡೆಸುತ್ತಿದ್ದು, ರೈತರು ಜಮೀನು ಕಳೆದುಕೊಳ್ಳುವ ಆತಂಕಕ್ಕೊಳಗಾಗಿದ್ದಾರೆ.
ಅಪರೂಪದ ನಿಕ್ಷೇಪ ಈ ಭಾಗದ ಭೂಮಿಯಲ್ಲಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಿಯೋಲಾಜಿಕಲ್ ಇಲಾಖೆ ಅಧಿಕಾರಿಗಳು ಮಾರ್ಕಿಂಗ್ ಮಾಡುತ್ತಿರುವುದರಿಂದ ರೈತರು ತಮ್ಮ ಭೂಮಿ ಎಲ್ಲಿ ಕೈ ತಪ್ಪಿ ಹೋಗುವುದೋ ಎಂಬ ಆತಂಕದಲ್ಲಿದ್ದಾರೆ.
ಯಾವ ಮಾಹಿತಿ ನೀಡದೆ, ಗ್ರಾಮಸಭೆಗೂ ತಿಳಿಸದೆ ಏಕಾಏಕಿ ಅಧಿಕಾರಿಗಳು ನಮ್ಮ ಜಮೀನುಗಳಿಗೆ ಬಂದು ಈ ರೀತಿ ಸರ್ವೆ ಮಾಡುತ್ತಿರುವ ಕ್ರಮ ಸರಿಯಲ್ಲ ಎಂದು ಈ ಭಾಗದ ರೈತ ಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಶಿವಾಳ ಗ್ರಾಮಸ್ಥರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆದಿದೆ.ಯಾವುದೇ ಕಾರಣಕ್ಕೂ ನಮ್ಮ ಜಮೀನುಗಳನ್ನು ಬಿಡುವುದಿಲ್ಲ. ರೈತ ಸಂಘದ ಮುಖಂಡರೊಂದಿಗೆ ಚರ್ಚಿಸಿದ್ದೇವೆ. ಅವರು ಸ್ಥಳಕ್ಕೆ ಬರುವುದಾಗಿ ತಿಳಿಸಿದ್ದಾರೆ.ನಂತರ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಕುರಿತು ತಹಶೀಲ್ದಾರ್ ನಟೇಶ್ ಪ್ರತಿಕ್ರಿಯೆ ನೀಡಿ, ದೇಶದೆಲ್ಲೆಡೆ ನಿಕ್ಷೇಪ ಇರುವ ಬಗ್ಗೆ ಜಿಯೋಲಾಜಿಕಲ್ ಇಲಾಖೆಯವರು ಸರ್ವೆ ನಡೆಸುತ್ತಾರೆ.ಅದೇ ರೀತಿ ಈ ಭಾಗದಲ್ಲೂ ಸರ್ವೆ ನಡೆಸುತ್ತಿದ್ದಾರೆ. ಯಾವ ನಿಕ್ಷೇಪ ಇದೆ ಎಂದು ತಿಳಿದುಬಂದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಶಶಿವಾಳ ಗ್ರಾಮದಲ್ಲಿ ಕಳೆದೆರಡು ತಿಂಗಳಿನಿಂದ ಅಧಿಕಾರಿಗಳು ಜಮೀನು, ಇನ್ನಿತರ ಭಾಗಗಳಲ್ಲಿ ಸರ್ವೆ ನಡೆಸುತ್ತಿರುವುದರಿಂದ ರೈತರಲ್ಲಿ ಕುತೂಹಲ ಮೂಡಿದೆ.ನಮ್ಮ ಭೂಮಿಯಲ್ಲಿ ಏನಿರಬಹುದೆಂಬ ನಿರೀಕ್ಷೆ ಮೂಡಿದೆ.ಜಿಯೋಲಾಜಿಕಲ್ ಅಧಿಕಾರಿಗಳು ಯಾವುದೇ ಸ್ಪಷ್ಟನೆ ನೀಡಿಲ್ಲ. ನಿಕ್ಷೇಪ ಪತ್ತೆ ಹಿನ್ನೆಲೆಯಲ್ಲಿ ಸರ್ವೇ ನಡೆಸುತ್ತಿದ್ದೇವೆ ಎಂದಷ್ಟೇ ಹೇಳಿದ್ದಾರೆ.