ನಾಗರಿಕರಿಂದ ನಗರದ ಸಮಸ್ಯೆಗಳ ಅನಾವರಣ

ಬೆಂಗಳೂರು, ನ.24-ಟೆಂಡರ್ ಶ್ಯೂರ್ ಕಾಮಗಾರಿ ಪೂರ್ಣಗೊಳಿಸಿ, ಬೀದಿ ನಾಯಿ ಹಾವಳಿ ತಪ್ಪಿಸಿ, ಕಸದ ಸಮಸ್ಯೆ ಬಗೆಹರಿಸಿ, ಟ್ರಾಫಿಕ್ ಸಮಸ್ಯೆ ನಿವಾರಿಸಿ, ಸ್ಕೈವಾಕ್ ನಿರ್ಮಾಣ ಮಾಡಿ, ಮಹಿಳೆಯರಿಗೆ ರಕ್ಷಣೆ ನೀಡಿ… ಹೀಗೆ ಹಲವಾರು ಸಮಸ್ಯೆಗಳ ಸರಮಾಲೆಯನ್ನು ನಗರದ ನಾಗರಿಕರು ಅನಾವರಣಗೊಳಿಸಿದರು.

ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಬಿಬಿಎಂಪಿ ಪೂರ್ವ ವಲಯಕ್ಕೆ ಸಂಬಂಧಪಟ್ಟ ಸಮಸ್ಯೆಗಳ ಕುರಿತು ನಗರದ ಪುರಭವನದಲ್ಲಿಂದು ಏರ್ಪಡಿಸಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಬೆಂಗಳೂರು ಜನತೆ ಸಮಸ್ಯೆಗಳನ್ನು ತೆರೆದಿಟ್ಟರು.

ಹೆಬ್ಬಾಳ ಕ್ಷೇತ್ರದ ಸಿವಿಲ್ ಇಂಜಿನಿಯರ್ ಶಿವಕುಮಾರ್ ಅವರು, ಹೆಬ್ಬಾಳ ಫ್ಲೈಓವರ್ ಟ್ರಾಫಿಕ್ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.
ಸರ್ಕಾರಿ ಜಮೀನು ಒತ್ತುವರಿಯನ್ನು ಫ್ಲೈಓವರ್‍ಗೆ ಬಳಸಿಕೊಳ್ಳುವಂತೆ ಕೋರಿದರೂ ಕೇಂದ್ರದಿಂದ ಸ್ಪಂದನೆ ಸಿಕ್ಕಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಿಕೊಡಿ ಎಂದು ಮನವಿ ಮಾಡಿದರು.
ಇತ್ತ ಪೀಟರ್ ಎಂಬ ಸಾಮಾಜಿಕ ಕಾರ್ಯಕರ್ತ, ಟೆಂಡರ್‍ಶ್ಯೂರ್ ಕಾಮಗಾರಿ ಪೂರ್ಣಗೊಂಡಿಲ್ಲ, ಕಸದ ಸಮಸ್ಯೆ ಬಗೆಹರಿದಿಲ್ಲ. ಕೇಬಲ್ ವಿಚಾರವಾಗಿ ಚೀಫ್ ಇಂಜಿನಿಯರ್ ವೆಂಕಟೇಶ್ ಎಂಬುವರು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಕಳೆದ ಐದು ವರ್ಷದಿಂದ ವೈಜ್ಞಾನಿಕ ಕಸ ವಿಲೇವಾರಿ ಮಾಡುತ್ತೇವೆ ಎಂದು ಹೇಳುತ್ತಲೇ ಇದ್ದೀರ.ಆದರೆ ಇಲ್ಲಿಯವರೆಗೆ ವೈಜ್ಞಾನಿಕ ಕಸ ವಿಲೇವಾರಿ ಮಾಡಿಲ್ಲ. ಕಸ ವಿಲೇವಾರಿ ದೊಡ್ಡ ಮಾಫಿಯಾ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ.ಅದನ್ನು ತಡೆಗಟ್ಟಲು ಆಗುವುದಿಲ್ಲವೇ?ಎಂದು ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಹೇಶ್ ರೆಡ್ಡಿ ಎಂಬುವರು ತರಾಟೆಗೆತೆಗೆದುಕೊಂಡರೆ, ಸಂಪಂಗಿರಾಮನಗರ ನಿವಾಸಿ ಶ್ರೀನಿವಾಸನ್, ರಾಜಾರಾಂ ಮೋಹನ್‍ರಾಯ್ ರಸ್ತೆಯಲ್ಲಿ ಸ್ಕೈವಾಕ್ ನಿರ್ಮಾಣವಾಗಿಲ್ಲ. ಸಾವಿರಾರು ಜನ ಓಡಾಡುತ್ತಾರೆ, ಅಲ್ಲಿ ಸ್ಕೈ ವಾಕ್ ನಿರ್ಮಿಸಿಕೊಡಿ.ಎಲ್ಲಿ ಜನರಿಗೆ ಸ್ಕೈ ವಾಕ್ ಅಗತ್ಯವಿದೆಯೋ ಅಲ್ಲಿ ಸ್ಕೈ ವಾಕ್ ನಿರ್ಮಿಸುತ್ತಿಲ್ಲ, ಜಾಹೀರಾತುದಾರರಿಗೆ ಮಾತ್ರ ಅನುಕೂಲವಾಗುತ್ತಿದೆ ಎಂದು ಆರೋಪಿಸಿದರು.

ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಹೆಣ್ಣು ಮಕ್ಕಳು ಓಡಾಡಲು ಕಷ್ಟವಾಗುತ್ತಿದೆ. ಅವರಿಗೆ ರಕ್ಷಣೆ ಬೇಕಿದೆ ಎಂದರು.
ಭಾಷೆ ಬಾರದಿರುವವರನ್ನು ತಂದು ಕಬ್ಬನ್ ಪಾರ್ಕ್‍ನಲ್ಲಿ ಸೆಕ್ಯೂರಿಟಿ ಕೆಲಸಕ್ಕೆ ನೇಮಿಸಿದ್ದು, ಇದರಿಂದ ಜನರಿಗೆ ಅನುಕೂಲವಾಗುತ್ತಿಲ್ಲ. ನಮ್ಮ ಟ್ರಾಫಿಕ್ ಪೆÇಲೀಸರು ಟ್ರಾಫಿಕ್ ಕ್ಲಿಯರ್ ಮಾಡುತ್ತಿಲ್ಲ, ಕೇವಲ ದಂಡ ಕಟ್ಟಿಸಿಕೊಳ್ಳುವಲ್ಲಿಯೇ ಬ್ಯುಸಿಯಾಗಿದ್ದಾರೆ ಎಂದು ಹೇಳಿದರು.
ರೆಸಿಡೆನ್ಸಿ ಏರಿಯಾಗಳಲ್ಲಿ ಫುಟ್‍ಪಾತ್‍ಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಇವು ಸಂಪಂಗಿ ರಾಮನಗರದ ಸಮಸ್ಯೆಗಳು, ಈ ಬಗ್ಗೆ ಗಮನಹರಿಸುವಂತೆ ಅಲ್ಲಿನ ಸಾರ್ವಜನಿಕರು ಆಗ್ರಹಿಸಿದರು.

ಇನ್ನೂ ಹತ್ತು ಹಲವು ಸಮಸ್ಯೆಗಳ ಬಗ್ಗೆ ಮಹಿಳೆಯರು, ವೃದ್ಧರು ಸರ್ಕಾರದ ಗಮನ ಸೆಳೆದರು.
ಲಿಖಿತ ದೂರುಗಳನ್ನು ಪಡೆದು ಬಗೆಹರಿಸುವಂತೆ ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಸೂಚನೆ ನೀಡಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಉತ್ತರ ನೀಡಿ, ಹೆಬ್ಬಾಳ ಸರ್ಕಾರಿ ಭೂಮಿ ಜಮೀನು ಒತ್ತುವರಿ ತೆರವು ಮಾಡಿ ಕಂದಾಯ ಇಲಾಖೆಗೆ ಹಸ್ತಾಂತರ ಮಾಡುತ್ತೇವೆ. ಟೆಂಡರ್‍ಶ್ಯೂರ್ ರಸ್ತೆಯಲ್ಲಿ ಪಾರ್ಕಿಂಗ್ ಮಾಡುವುದು, ಕಸ ಹಾಕುವುದನ್ನು ನಿಯಂತ್ರಿಸಲು ಕ್ರಮಕೈಗೊಳ್ಳುತ್ತೇವೆ. ಹಕ್ಕುಪತ್ರ ನೀಡುವ ಪ್ರಕ್ರಿಯೆ ಶೀಘ್ರಗತಿಯಲ್ಲಿ ಜರುಗಲಿದೆ ಎಂದು ಹೇಳಿದರು.

ಇಂದಿರಾನಗರ ವಾಣಿಜ್ಯ ಮಳಿಗೆ ನೋಟೀಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಪ್ರಕರಣ ನ್ಯಾಯಾಲಯದಲ್ಲಿದ್ದು, ಮಾನವೀಯತೆ ದೃಷ್ಟಿಯಿಂದ ಪ್ರಕರಣ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಟೆಂಡರ್‍ಶ್ಯೂರ್ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡುವುದು, ಬೈಕ್ ಓಡಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು.ಶಾಂತಿನಗರ ವಾರ್ಡ್‍ನ ಹಕ್ಕು ಪತ್ರ ವಿತರಣೆ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

ನಾಗವಾರದಲ್ಲಿ ಸ್ಮಶಾನ ಒತ್ತುವರಿ ಆಗಿರುವ ಬಗ್ಗೆ ದೂರು ಬಂದಿದೆ ಈ ಸಂಬಂಧ ಕ್ರಮಕೈಗೊಳ್ಳುತ್ತೇವೆ. ಮಾರ್ಷಲ್‍ಗಳ ನೇಮಕ ಮಾಡಿ ಎಲ್ಲೆಂದರಲ್ಲಿ ಕಸ ಹಾಕುವವರ ವಿರುದ್ಧವೂ ನಿಗಾ ಇಡಲಾಗಿದೆ.ಈಗಾಗಲೇ 4 ಸಾವಿರ ಜನರನ್ನು ಪತ್ತೆ ಹಚ್ಚಿದ್ದೇವೆ. ಅಂಥವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಸಿದ್ಧತೆ ಮಾಡಿದ್ದೇವೆ. ಎಲ್ಲೆಂದರಲ್ಲಿ ಕಸ ಸುರಿದರೆ ಕೋರ್ಟ್‍ಗೆ ಅಲೆಯಬೇಕಾಗುತ್ತದೆ ಎಂದರು.
ಅಗತ್ಯವಿರುವೆಡೆ ಸ್ಕೈ ವಾಕ್ ನಿರ್ಮಾಣ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೇಯರ್ ಗಂಗಾಂಬಿಕೆ, ಆಯುಕ್ತ ಮಂಜುನಾಥಪ್ರಸಾದ್, ಆಡಳಿತ ಪಕ್ಷದ ನಾಯಕ ಶಿವರಾಜ್, ಪಾಲಿಕೆ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ