ಬೆಂಬಲ ಬೆಲೆಯಡಿ ಭತ್ತವನ್ನು ಖಾಸಗಿ ಮಿಲ್‍ಗಳ ಮೂಲಕ ಖರೀದಿ

ಬೆಂಗಳೂರು, ನ.24-ದೇಶದಲ್ಲೇ ಮೊದಲ ಬಾರಿಗೆ ಬೆಂಬಲ ಬೆಲೆಯಡಿ ಭತ್ತವನ್ನು ಖಾಸಗಿ ಮಿಲ್‍ಗಳ ಮೂಲಕ ಖರೀದಿ ಮಾಡಿ ಅದನ್ನು ಪಡಿತರ ವ್ಯವಸ್ಥೆ ಮೂಲಕ ನೇರವಾಗಿ ಹಂಚಿಕೆ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.

ಬೆಂಗಳೂರಿನಲ್ಲಿಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೆರೇಗೌಡ, ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಮತ್ತಿತರರು ಭಾಗವಹಿಸಿದ್ದರು.

ಬೆಲೆ ಕುಸಿತದಿಂದ ಕಂಗಾಲಾಗಿರುವ ಭತ್ತದ ಬೆಳೆಗಾರರಿಗೆ ಧೈರ್ಯ ತುಂಬುವ ಸಲುವಾಗಿ ಕೇಂದ್ರ ಸರ್ಕಾರದ ನಿಗದಿತ ಸಮಯಕ್ಕಿಂತಲೂ ಮೊದಲು ರಾಜ್ಯ ಸರ್ಕಾರ ಪ್ರತಿ ಟನ್‍ಗೆ 1750 ರೂ.ಬೆಂಬಲ ಬೆಲೆ ನೀಡಿ ತಕ್ಷಣವೇ ಖರೀದಿಯನ್ನು ಆರಂಭಿಸುತ್ತಿದೆ ಎಂದು ಸಚಿವ ಬಂಡೆಪ್ಪ ಕಾಶಂಪೂರ್ ತಿಳಿಸಿದರು.
ಕೇಂದ್ರ ಸರ್ಕಾರ ಜ.1 ರಿಂದ ಖರೀದಿ ಆರಂಭಿಸಲು ಸೂಚಿಸಿದೆ.ಆದರೆ ಮಾರುಕಟ್ಟೆಯಲ್ಲಿ ಭತ್ತಕ್ಕೆ 1300 ರಿಂದ 1400ರವರೆಗೆ ಬೆಲೆ ಇದೆ.ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆಗೂ, ಮಾರುಕಟ್ಟೆ ಬೆಲೆಗೂ 300 ರಿಂದ 400 ರೂ.ವ್ಯತ್ಯಾಸವಿದೆ.ರೈತರಿಗೆ ನಷ್ಟವಾಗಬಾರದು ಎಂಬ ಕಾರಣಕ್ಕಾಗಿ ನಿಗದಿತ ಸಮಯಕ್ಕಿಂತಲೂ ಮುನ್ನವೇ ರಾಜ್ಯ ಸರ್ಕಾರ ಖರೀದಿ ಆರಂಭಿಸುತ್ತಿದೆ.

ಕರ್ನಾಟಕದಲ್ಲಿ ಸುಮಾರು 10 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿದ್ದು, 45 ಲಕ್ಷ ಮೆಟ್ರಿಕ್ ಟನ್ ಭತ್ತ ಉತ್ಪಾದನೆಯ ಅಂದಾಜಿದೆ.ಕೇಂದ್ರ ಸರ್ಕಾರ 2 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ಅನುಮತಿ ನೀಡಿದೆ.ಇನ್ನಷ್ಟು ಭತ್ತ ಖರೀದಿ ಅಗತ್ಯ ಕಂಡು ಬಂದರೆ ಕೇಂದ್ರಕ್ಕೆ ಮನವಿ ಸಲ್ಲಿಸಿ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿಗಳು ನ.27 ರಂದು ಬೆಂಗಳೂರಿಗೆ ಆಗಮಿಸುತ್ತಾರೆ.ಇಲ್ಲಿಂದ ಜಿಲ್ಲೆಗೆ ತೆರಳಿದ ಬಳಿಕ ಡಿ.5ರಿಂದ ರೈತರ ನೋಂದಣಿ ಕಾರ್ಯ ಆರಂಭವಾಗಲಿದೆ.ಡಿ.15 ರಿಂದಲೇ ಭತ್ತದ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು.ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಭತ್ತ ಖರೀದಿಸಿ ಖಾಸಗಿ ಮಿಲ್‍ಗಳಿಗೆ ಸರಬರಾಜು ಮಾಡಲಾಗುತ್ತದೆ.ಅಲ್ಲಿ ಅಕ್ಕಿಯನ್ನಾಗಿ ಪರಿವರ್ತಿಸಿದ ಬಳಿಕ ನೇರವಾಗಿ ಪಡಿತರ ಚೀಟಿದಾರರಿಗೆ ವಿತರಣೆ ಮಾಡಲಾಗುವುದು.ಈ ಮೊದಲು ಭತ್ತ ಖರೀದಿಸಿ ಗೋದಾಮಿನಲ್ಲಿ ಸಂಗ್ರಹಿಸಿಡಲಾಗುತ್ತಿತ್ತು. ಈ ಬಾರಿ ಆ ರೀತಿ ಮಾಡುವುದಿಲ್ಲ ಎಂದರು.

ಈರುಳ್ಳಿ ಬೆಲೆ 700 ರಿಂದ 1000, 300 ರಿಂದ 400 ರೂ.ಗುಣಮಟ್ಟದ ಆಧಾರಿತವಾಗಿ ದರ ಇದೆ.ಈರುಳ್ಳಿ ಬೆಳೆದ ರೈತ ಕಂಗಾಲಾಗಿದ್ದಾನೆ. ಅವರ ನೆರವಿಗೆ ಬರಲು ತಕ್ಷಣವೇ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಸಂಪುಟ ಉಪಸಮಿತಿಗೆ ಸೂಚನೆ ನೀಡಿದ್ದಾರೆ.ನಾವು ಇಂದು ಸಂಜೆಯೇ ಪ್ರಸ್ತಾವನೆ ಸಲ್ಲಿಸುತ್ತೇವೆ. ಮುಖ್ಯಮಂತ್ರಿ ಕೂಡ ಕೂಡಲೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಈ ಹಿಂದೆ ಮಾವು ಬೆಲೆ ಕುಸಿತಗೊಂಡಾಗ ರಾಜ್ಯ ಸರ್ಕಾರ ಹೆಚ್ಚುವರಿ ಹಣ ನೀಡಿ ರೈತರಿಗೆ ನೆರವಾಗಿತ್ತು.ಅದೇ ಮಾದರಿಯಲ್ಲಿ ಈರುಳ್ಳಿಗೆ ಹೆಚ್ಚುವರಿ ಹಣ ನೀಡುವುದು ಅಥವಾ ಬೆಂಬಲ ಬೆಲೆಯಡಿ ಸರ್ಕಾರವೇ ನೇರ ಖರೀದಿ ಮಾಡುವುದು ಸೇರಿದಂತೆ ಎರಡು ರೀತಿಯ ಪ್ರಸ್ತಾವನೆಗಳನ್ನು ಕಳುಹಿಸಲಾಗಿದೆ.ಮುಖ್ಯಮಂತ್ರಿ ಯವರು ಸಂಜೆಯೊಳಗಾಗಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಉದ್ದು, ಸೋಯಾ ಬೆಲೆ ಕುಸಿತ ಕಂಡಿದ್ದು, ರಾಜ್ಯ ಸರ್ಕಾರ ಬೆಂಬಲ ಬೆಲೆ ಘೋಷಿಸಿ ಖರೀದಿ ಪ್ರಕ್ರಿಯೆ ಆರಂಭಿಸುತ್ತಿದ್ದಂತೆ ಮಾರುಕಟ್ಟೆಯಲ್ಲೂ ಬೆಲೆ ಹೆಚ್ಚಳವಾಗಿದೆ. ಬೆಂಬಲ ಬೆಲೆಯಡಿ ಖರೀದಿ ಮಾಡುವ ಕೇಂದ್ರದಲ್ಲಿ ರೈತರು ನೋಂದಣಿ ಮಾಡಿಕೊಳ್ಳುತ್ತಿಲ್ಲ. ಆದರೂ ರಾಜ್ಯ ಸರ್ಕಾರ ತಕ್ಷಣದಿಂದಲೇ ಖರೀದಿ ಪ್ರಕ್ರಿಯೆ ಆರಂಭಿಸುತ್ತಿದೆ ಮತ್ತು ನೋಂದಣಿಗೆ ಇನ್ನೂ 10 ದಿನ ಹೆಚ್ಚುವರಿ ಕಾಲಾವಕಾಶ ನೀಡುತ್ತಿದೆ. ಸರ್ಕಾರ ಉದ್ದುಗೆ 5600 ರೂ., ಸೋಯಾ 3399 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸುಮಾರು 15.56 ಲಕ್ಷ ಹೆಕ್ಟೇರ್‍ನಲ್ಲಿ ತೊಗರಿ ಬಿತ್ತನೆಯಾಗಿದ್ದು, 11 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯ ಗುರಿ ಇದೆ. ಈಗಾಗಲೇ ಬೆಳೆ ಕೈಗೆ ಬರುತ್ತಿದ್ದು, ಮಾರುಕಟ್ಟೆಯಲ್ಲಿ 4300 ರೂ.ದರ ಇದೆ.ಸರ್ಕಾರ 5675 ರೂ.ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ತೊಗರಿ ಖರೀದಿಗೆ ನಿರ್ಧರಿಸಿದೆ.ಇನ್ನು ಒಂದು ತಿಂಗಳು ಕಾಲಾವಕಾಶವಿದ್ದು, ಈಗಿನಿಂದಲೇ ಖರೀದಿ ಆರಂಭಿಸಿದ್ದೇವೆ ಎಂದು ಬಂಡೆಪ್ಪ ಕಾಶಂಪೂರ್ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ