ಕಾಂಗ್ರೇಸ್ ಪಕ್ಷದಲ್ಲಿ ಭುಗಿಲೆದ್ದ ಭಿನ್ನಮತ

ಬೆಂಗಳೂರು, ನ.24- ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಮತ್ತೆ ಭುಗಿಲೆದ್ದಿದೆ.ಪಕ್ಷದಲ್ಲಿ ಹಿರಿಯರನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ.ಸಂಪುಟ ವಿಸ್ತರಣೆ ಸಂದರ್ಭದಲ್ಲೂ ಆದ್ಯತೆ ನೀಡದೆ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಹಲವು ಹಿರಿಯ ಕಾಂಗ್ರೆಸ್ ಮುಖಂಡರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕಿದ್ದಾರೆ.

ಕಾಂಗ್ರೆಸ್‍ನ ಹಿರಿಯ ಮುಖಂಡರಾದ ಎಚ್.ಕೆ.ಪಾಟೀಲ್, ರೋಷನ್ ಬೇಗ್, ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ್ ಸೇರಿದಂತೆ ಅನೇಕರು ತಮ್ಮನ್ನು ಕಡೆಗಣಿಸುತ್ತಿರುವ ಸಂಬಂಧ ಪ್ರತ್ಯೇಕ ಸಭೆ ನಡೆಸಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಸಮ್ಮಿಶ್ರ ಸರ್ಕಾರ ರಚನೆಯಾಗಿ ಆರು ತಿಂಗಳಾದರೂ ಸಂಪುಟ ವಿಸ್ತರಣೆಯಾಗಿಲ್ಲ. ನಿಗಮ-ಮಂಡಳಿಗಳಿಗೆ ನೇಮಕ ಮಾಡಿಲ್ಲ. ಹಲವು ನೆಪಗಳನ್ನು ಹೇಳಿಕೊಂಡು ವಿನಾಕಾರಣ ಮುಂದೂಡಲಾಗುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಆರೇಳು ಬಾರಿ ಗೆದ್ದಿರುವ ನಮ್ಮಂತಹವರು, ಪಕ್ಷಕ್ಕಾಗಿ ಸಾಕಷ್ಟು ಸೇವೆ ಮಾಡಿರುವವರು, ಪಕ್ಷದ ಗೆಲುವಿಗೆ ಶ್ರಮಿಸಿರುವವರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಪ್ರಥಮ ಸಂಪುಟ ರಚನೆ ಸಂದರ್ಭದಲ್ಲೇ ಹಿರಿಯರಿಗೆ ಆದ್ಯತೆ ನೀಡಿಲ್ಲ. ವಿಸ್ತರಣೆ ಸಂದರ್ಭದಲ್ಲಾದರೂ ಆದ್ಯತೆ ನೀಡಬೇಕು.ಇಲ್ಲದಿದ್ದರೆ ಲೋಕಸಭೆ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಬೇಕಿತ್ತು.ನಾನೇನು ಸಂಪುಟಕ್ಕೆ ಸೇರಿಸಿಕೊಳ್ಳಿ ಎಂದು ಒತ್ತಾಯ ಮಾಡಿಲ್ಲ. ಆದರೆ, ಹಿರಿಯರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕಿತ್ತು.
ಸಚಿವ ಸಂಪುಟ ವಿಸ್ತರಣೆ ಮಾಡುವುದು ವಿಳಂಬವಾಗಿರುವುದರಿಂದ ಆಕಾಂಕ್ಷಿಗಳಲ್ಲಿ ಅಸಮಾಧಾನವಾಗಿರುವುದು ಸಹಜ. ವಿಸ್ತರಣೆಯನ್ನು ಬೇಗ ಮಾಡಲಿ ಎಂದು ಹೇಳುತ್ತೇನೆ. ಅಸಮಾಧಾನಗೊಂಡಿರುವ ಯಾರೂ ನನ್ನೊಂದಿಗೆ ಈವರೆಗೆ ಮಾತನಾಡಿಲ್ಲ. ನಾನು ಕೂಡ ಯಾರೊಂದಿಗೂ ಚರ್ಚಿಸಿಲ್ಲ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ