
ಬೆಂಗಳೂರು,ನ.22- ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಇದೇ ತಿಂಗಳಿನಲ್ಲಿ ನಡೆಯಲಿದೆ ಎನ್ನುವ ಮೂಲಕ ಗೃಹ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಂಪುಟ ವಿಸ್ತರಣೆ ವಿಳಂಬವಾಗುವ ಸುಳಿವು ನೀಡಿದ್ದಾರೆ.
ಪರಮೇಶ್ವರ್ ಅವರ ಈ ಹೇಳಿಕೆಯಿಂದ ಸಚಿವ ಸಂಪುಟ ವಿಸ್ತರಣೆ ಇನ್ನಷ್ಟು ಮುಂದೂಡುವ ಸಾಧ್ಯತೆ ನಿಚ್ಚಳವಾಗಿದೆ. ಮಧ್ಯಪ್ರದೇಶ, ಛತ್ತೀಸ್ಘಡ, ಮಿಜೋರಾಂ, ತೆಲಂಗಾಣ ಹಾಗೂ ರಾಜಸ್ಥಾನ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಪರ ರಾಹುಲ್ಗಾಂಧಿ ಪ್ರಚಾರ ನಡೆಸುತ್ತಿದ್ದಾರೆ.
ಹೀಗಾಗಿ ಅವರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ವೇಣುಗೋಪಾಲ್ ಅವರ ಜೊತೆ ಚರ್ಚಿಸಿ ನಮಗೆ ತಿಳಿಸಿದ ನಂತರ ಈ ಪ್ರಕ್ರಿಯೆಗಳು ಅಂತಿಮಗೊಳ್ಳಲಿದೆ ಎಂದು ಹೇಳಿದರು.
ಸಂಪುಟ ವಿಸ್ತರಣೆ ಮಾಡಬೇಕೆಂಬ ಒತ್ತಡ ಶಾಸಕರಿಂದ ಕೇಳಿಬಂದಿದೆ.ಆದರೆ ಯಾರನ್ನು ತೆಗೆದುಕೊಳ್ಳಬೇಕು, ಯಾರನ್ನು ಕೈಬಿಡಬೇಕು ಎಂಬುದನ್ನು ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನಿಸಬೇಕು.ಏಕಾಏಕಿ ಏಕ ಪಕ್ಷೀಯವಾಗಿ ತೀರ್ಮಾನಿಸಲು ಸಾಧ್ಯವಿಲ್ಲ. ಸಂಪುಟ ವಿಸ್ತರಣೆ ಇಂಥದ್ದೇ ದಿನ ನಡೆಯಲಿದೆ ಎಂದು ಹೇಳಲು ಪರಮೇಶ್ವರ್ ನಿರಾಕರಿಸಿದರು.
ವಿಳಂಬ ಸಾಧ್ಯತೆ:
ಮೂಲಗಳ ಪ್ರಕಾರ ಸಚಿವ ಸಂಪುಟ ವಿಸ್ತರಣೆ ಮುಂದೂಡುವ ಸಾಧ್ಯತೆಯೇ ಹೆಚ್ಚಾಗಿದೆ.ಸಂಪುಟಕ್ಕೆ ಸೇರ್ಪಡೆಯಾಗಲು ಜೇನುಗೂಡಿನಂತಿರುವ ಆಕಾಂಕ್ಷಿಗಳ ಪಟ್ಟಿಯಿಂದ ಸಂಪುಟ ವಿಸ್ತರಣೆಗೆ ಕೈ ಹಾಕಿದರೆ ಪಕ್ಷದಲ್ಲಿ ಭಿನ್ನಮತ ಉಂಟಾಗಬಹುದೆಂಬ ಭೀತಿ ಉಭಯ ಪಕ್ಷಗಳಿಗೆ ಕಾಡುತ್ತಿದೆ.
ಈ ಹಿಂದೆ ಸಂಪುಟ ವಿಸ್ತರಣೆ ಮಾಡಬೇಕೆಂದು ಕೆಲ ಶಾಸಕರು ಒತ್ತಡ ಹಾಕಿ ಪಕ್ಷದ ವರಿಷ್ಠರ ವಿರುದ್ಧವೇ ಕೆಂಡ ಕಾರಿದ್ದರು. ಪ್ರತಿಯೊಂದನ್ನು ಎಚ್ಚರಿಕೆಯಿಂದಲೇ ತೀರ್ಮಾನಿಸುತ್ತಿರುವ ದೋಸ್ತಿ ಪಕ್ಷಗಳ ಮುಖಂಡರು ಭಿನ್ನಮತಕ್ಕೆ ಅವಕಾಶವಿಲ್ಲದಂತೆ ಅಳೆದು ತೂಗಿ ಕ್ರಮ ಕೈಗೊಳ್ಳುತ್ತಿದ್ದಾರೆ.
ಇರುವ ಕೆಲವು ಸ್ಥಾನಗಳಿಗೆ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆದಿದೆ.ಒಂದು ವೇಳೆ ಸಚಿವ ಸ್ಥಾನ ಸಿಗದಿದ್ದವರು ನಾಳೆ ಸರ್ಕಾರದ ವಿರುದ್ದ ಭಿನ್ನಮತ ಸಾರಬಹುದು.
ಪರಿಸ್ಥಿತಿಯ ಲಾಭ ಪಡೆಯಲು ಬಿಜೆಪಿ ತುದಿಗಾಲಲ್ಲಿ ನಿಂತಿರುವುದರಿಂದ ಕಾಂಗ್ರೆಸ್-ಜೆಡಿಎಸ್ ನಾಯಕರು ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ.
ಬೆಳಗಾವಿ ಅಧಿವೇಶನ ಇಲ್ಲವೇ ಐದು ರಾಜ್ಯಗಳ ಫಲಿತಾಂಶ ಪ್ರಕಟಗೊಂಡ ಬಳಿಕ ಸಂಪುಟ ವಿಸ್ತರಣೆಗೆ ಕೈ ಹಾಕುವ ಸಾಧ್ಯತೆ ಇದೆ ಉನ್ನತ ಮೂಲಗಳು ತಿಳಿಸಿವೆ.