ಪ್ರವಾಸದ್ಯೋಮ ಅಭಿವೃದ್ಧಿಗೆ ಒತ್ತು ನೀಡುವಂತೆ ಒತ್ತಾಯ

ಬೆಂಗಳೂರು, ನ.22-ಪ್ರವಾಸೋದ್ಯಮ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುವಂತೆ ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಒತ್ತಾಯಿಸಿದೆ.

ಪ್ರಮುಖವಾಗಿ ಬೆಂಗಳೂರಿನ ಲಾಲ್‍ಬಾಗ್, ಕಬ್ಬನ್‍ಪಾರ್ಕ್ ಹಾಗೂ ಕೆರೆಗಳನ್ನು ಅಭಿವೃದ್ಧಿಪಡಿಸಿ ಬೋಟಿಂಗ್ ಸೌಲಭ್ಯ ಕಲ್ಪಿಸುವಂತೆ ಸಂಘದ ಅಧ್ಯಕ್ಷ ಬಿ.ಚಂದ್ರಶೇಖರ್ ಹೆಬ್ಬಾರ್ ಆಗ್ರಹಿಸಿದ್ದಾರೆ.

ಹಾಸನ, ಬಾಗಲಕೋಟೆ, ಶಿವಮೊಗ್ಗ ಹಾಗೂ ಕೊಡಗು ಜಿಲ್ಲೆಗಳ ಪ್ರಮುಖ ಐತಿಹಾಸಿಕ, ಧಾರ್ಮಿಕ ಸ್ಥಳಗಳ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೂ ಆದ್ಯತೆ ನೀಡುವಂತೆ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದ್ದಾರೆ.

ಮೈಸೂರಿನ ಕೆಆರ್‍ಎಸ್‍ಅನ್ನು ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವುದನ್ನು ನಮ್ಮ ಸಂಘ ಸ್ವಾಗತಿಸುತ್ತದೆ ಎಂದ ಅವರು, ಈ ಯೋಜನೆಯಿಂದ ಮೈಸೂರು ಹಾಗೂ ಕರ್ನಾಟಕ ದೇಶದ ಮುಕುಟ ಪ್ರಾಯವೆನಿಸಲಿದೆ.ಇದರಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಮಾನ್ಯತೆ ದೊರೆಯಲಿದೆ ಎಂದರು.
ಕೆಆರ್‍ಎಸ್‍ನಲ್ಲಿ 125 ಅಡಿಯ ಕಾವೇರಿ ಪ್ರತಿಮೆ ನಿರ್ಮಾಣದಂತಹ ಕೆಲಸವನ್ನ್ನು ಕೈಗೆತ್ತಿಕೊಳ್ಳುವ ಮೂಲಕ ಅಭಿವೃದ್ಧಿಪಡಿಸುವಂತೆ ಅವರು ಇದೇ ವೇಳೆ ಕೋರಿದ್ದಾರೆ.

ಆಧುನಿಕ ತಂತ್ರಜ್ಞಾನ ಹಾಗೂ ನಿಪುಣ ತಂತ್ರಜ್ಞರನ್ನು ಬಳಸಿಕೊಂಡು ಕೆಆರ್‍ಎಸ್‍ಗೂ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರವಹಿಸಿ ಕಾರ್ಯ ರೂಪಕ್ಕೆ ತರುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಇಂತಹ ಬೃಹತ್ ಯೋಜನೆಗಳು ಸಿಗುವುದೇ ವಿರಳ.ಅಂತಹದ್ದರಲ್ಲಿ ಇದನ್ನು ಕೈ ಬಿಟ್ಟರೆ ಬೇರೆ ಜಿಲ್ಲೆಗೆ ಈ ಯೋಜನೆ ಸ್ಥಳಾಂತರವಾಗಬಹುದು. ಹಾಗಾಗಿ ಈ ಯೋಜನೆ ಕೈ ಬಿಡದೆ ನಮ್ಮ ನೀರಿನ ಪ್ರಮುಖ ಕೇಂದ್ರ ಬಿಂದುವಾದ ಕೆಆರ್‍ಎಸ್‍ಗೆ ತೊಂದರೆಯಾಗದಂತೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ