ಸಿ.ಎಂ.ಕುಮಾರಸ್ವಾಮಿ ಕರೆದಿದ್ದ ಸಭೆಗೆ ಸ್ಪಂದಿಸಿದ ಸಕ್ಕರೆ ಕಾರ್ಖಾನೆ ಮಾಲೀಕರು

ಬೆಂಗಳೂರು, ನ.22-ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕರೆದಿದ್ದ ಸಭೆಗೆ ಬಹುತೇಕ ಸಕ್ಕರೆ ಕಾರ್ಖಾನೆ ಮಾಲೀಕರು ಹಾಜರಾಗುವ ಮೂಲಕ ಸ್ಪಂದಿಸಿದರು.

ಎಸ್.ಎಸ್.ಮಲ್ಲಿಕಾರ್ಜುನ್, ಮಹಂತೇಶ್ ಕೌಜಲಗಿ ಮಠ್, ಲಕ್ಷ್ಮಣ್ ಸವದಿ, ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಸಕ್ಕರೆ ಕಾರ್ಖಾನೆ ಮಾಲೀಕರು ಸಭೆಗೆ ಹಾಜರಾಗಿದ್ದರು.

ಸತೀಶ್ ಜಾರಕಿ ಹೊಳಿ, ರಮೇಶ್ ಜಾರಕಿ ಹೊಳಿ, ಬಾಲಚಂದ್ರ ಜಾರಕಿ ಹೊಳಿ, ಆನಂದ್ ನ್ಯಾಮೇಗೌಡ, ಎಸ್.ಆರ್.ಪಾಟೀಲ್, ಉಮೇಶ್ ಕತ್ತಿ, ರೇಣುಕಾ ಸೇರಿದಂತೆ ಬಹಳಷ್ಟು ಮಂದಿ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.

ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಪಾವತಿಸಬೇಕಿರುವ ಕಬ್ಬಿನ ಬಾಕಿ ಮತ್ತು ಕಬ್ಬು ಖರೀದಿ ಬೆಲೆ ನಿಗದಿ ವಿವಾದವಾಗಿ ಮಾರ್ಪಟ್ಟಿದ್ದು, ಬೆಳಗಾವಿಯಲ್ಲಿ ರೈತರು ಕಳೆದ ವಾರದಿಂದಲೂ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಿಗೆ ಬೆಂಬಲವಾಗಿ ರೈತ ಸಂಘಟನೆಗಳು ಕೂಡ ರಾಜ್ಯಾದ್ಯಂತ ಪ್ರತಿಭಟನೆಗೆ ಮುಂದಾಗಿವೆ. ಬಿಜೆಪಿ ಈಗಾಗಲೇ ಒಂದು ಸುತ್ತಿನ ಪ್ರತಿಭಟನೆ ನಡೆಸಿದೆ.

ಮೊನ್ನೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಖುದ್ದಾಗಿ ಕಬ್ಬು ಬೆಳೆಗಾರರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಭೆ ನಡೆಸಿದರು.ಆದರೆ ಅದರಿಂದ ಸಮಸ್ಯೆ ಸಂಪೂರ್ಣ ಇತ್ಯರ್ಥವಾಗಿಲ್ಲ. ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸ್ವತಃ ಮುಖ್ಯಮಂತ್ರಿಯವರೇ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಚರ್ಚೆ ನಡೆಸಿದ್ದಾರೆ.
ಡಿ.10 ರಿಂದ ಬೆಳಗಾವಿ ಅಧಿವೇಶನ ಆರಂಭಗೊಳ್ಳಲಿದ್ದು, ಆ ವೇಳೆಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಿಎಂ ಹರಸಾಹಸ ಪಡುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ