ಮುಂಬೈ: ಎಟಿಎಂ ವ್ಯವಸ್ಥೆಯಲ್ಲಿ ತಂದಿರುವ ಕೆಲ ಹೊಸ ಬದಲಾವಣೆಗಳಿಂದ ಮುಂದಿನ ಮಾರ್ಚ್ ವೇಳೆಗೆ ಬರೋಬ್ಬರಿ 1.13 ಲಕ್ಷ ಎಟಿಎಂಗಳು ಸ್ಥಗಿತಗೊಳ್ಳಲಿವೆ ಎಂದು ಎಟಿಎಂ ಉದ್ಯಮದ ಒಕ್ಕೂಟ ತಿಳಿಸಿದೆ.
ಸದ್ಯ ಭಾರತದಲ್ಲಿ 2.38 ಲಕ್ಷ ಎಟಿಎಂಗಳು ಕಾರ್ಯನಿರ್ವಹಿಸುತ್ತಿವೆ. ಇನ್ನು ಕೆಲವೇ ತಿಂಗಳಲ್ಲಿ ಇದರ ಸಂಖ್ಯೆ ಅರ್ಧಕ್ಕೆ ಇಳಿಮುಖವಾಗಲಿದೆ ಎಂದು ಎಟಿಎಂ ಉದ್ಯಮದ ಒಕ್ಕೂಟ ತಿಳಿಸಿದೆ. ಈ ಬೆಳವಣಿಗೆಯಿಂದ ಸಾವಿರಾರು ಜನರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಇತ್ತೀಚೆಗೆ ಎಟಿಎಂಗಳ ಸಾಪ್ಟ್ವೇರ್ ಹಾಗೂ ಹಾರ್ಡ್ವೇರ್ಗಳನ್ನು ಅಪ್ಗ್ರೇಡ್ ಮಾಡಲಾಗಿತ್ತು. ಇದರಿಂದ ಕೆಲವಷ್ಟು ದಿನಗಳ ಕಾಲ ಎಟಿಎಂಗಳಲ್ಲಿ ಸರಿಯಾಗಿ ಹಣ ಲಭ್ಯವಾಗುತ್ತಿರಲಿಲ್ಲ. ಇದಲ್ಲದೆ, ಎಟಿಎಂ ನಿಯಮಗಳಲ್ಲಿ ಸರ್ಕಾರ ಕೆಲ ಬದಲಾವಣೆ ಮಾಡಿತ್ತು. ಇದರಿಂದಾಗಿ ಇನ್ನೂ ಕೆಲ ಎಟಿಎಂಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವುಗಳನ್ನು ಸಂಪೂರ್ಣವಾಗಿ ಮುಚ್ಚಲು ನಿರ್ಧರಿಸಲಾಗಿದೆ. ಆ ಪೈಕಿ ಗ್ರಾಮೀಣ ಪ್ರದೇಶಗಳಲ್ಲಿರುವ ಎಟಿಎಂಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮುಚ್ಚಲಿವೆ.
ಇನ್ನು, ಎಟಿಎಂಗಳ ನಿರ್ವಹಣೆಗೆ ತಗಲುತ್ತಿರುವ ವೆಚ್ಛ ದಿನೇ ದಿನೇ ಹೆಚ್ಚುತ್ತಿದೆ. ಎಟಿಎಂ ಸೇವೆ ನೀಡುವವರಿಗೆ ಇದನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಎಟಿಎಂಗಳು ಸ್ಥಗಿತಗೊಳ್ಳಲು ಇದೂ ಒಂದು ಕಾರಣ. ಮಾರ್ಚ್ ವೇಳೆಗೆ ಇಷ್ಟು ದೊಡ್ಡ ಮೊತ್ತದಲ್ಲಿ ಎಟಿಎಂ ಮುಚ್ಚುತ್ತಿರುವುದರಿಂದ ಸಾರ್ವಜನಿಕರಿಗೆ ಹಣದ ಕೊರತೆ ಎದುರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.