ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ವಿಸರ್ಜನೆ

ಶ್ರೀನಗರ : ಕಳೆದ ಜೂನ್​ನಲ್ಲಿ ಪಿಡಿಪಿಯ ಜೊತೆಗಿನ ತಮ್ಮ ಬೆಂಬಲವನ್ನು ಬಿಜೆಪಿ ಹಿಂಪಡೆದಿದ್ದರಿಂದ ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಜಾರಿಯಾಗಿತ್ತು. ಆದರೆ,  ಪಿಡಿಪಿ, ಕಾಂಗ್ರೆಸ್​, ಎನ್​ಸಿ ಪಕ್ಷಗಳು ಸೇರಿ ಮೈತ್ರಿ ಸರ್ಕಾರ ರಚಿಸಲು ಬುಧವಾರ ಚರ್ಚೆ ನಡೆಸಿದ್ದವು. ಈ ಮಧ್ಯೆ ರಾಜ್ಯಪಾಲರು  ವಿಧಾನಸಭೆಯನ್ನು ವಿಸರ್ಜಿಸಿದ್ದು, ಈ ಮೂರು ಪಕ್ಷಗಳ ಮೈತ್ರಿ ಸರ್ಕಾರದ ಕನಸಿಗೆ ಭಂಗವಾಗಿದೆ.

ಜಮ್ಮು ಕಾಶ್ಮೀರದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾಗಿದ್ದ ಕಾಂಗ್ರೆಸ್​- ಪಿಡಿಪಿ ಪಕ್ಷಗಳು ನ್ಯಾಷನಲ್​ ಕಾನ್ಫರೆನ್ಸ್​ ಪಕ್ಷದ ಬೆಂಬಲದೊಂದಿಗೆ ಮೈತ್ರಿ ಸರ್ಕಾರ ರಚಿಸಲು ಮುಂದಾಗಿದ್ದವು. ಪಿಡಿಪಿ ನಾಯಕ ಅಲ್ತಾಫ್​ ಬುಖಾರಿ ಅವರನ್ನು ಸಿಎಂ ಅಭ್ಯರ್ಥಿ ಎಂದೂ ಬಿಂಬಿಸಲಾಗಿತ್ತು. ಆದರೆ, ಈ ಬೆನ್ನಲ್ಲೇ ರಾಜ್ಯಪಾಲ ಸತ್ಯಪಾಲ್​ ಮಲಿಕ್​ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ.

ಮೂರೂ ಪಕ್ಷಗಳ ಶಾಸಕರ ಸಂಖ್ಯೆಯನ್ನು ಸೇರಿಸಿದರೆ ಬಹುಮತ ಸಾಬೀತುಪಡಿಸಲು ಸಾಧ್ಯ ಇರುವುದರಿಂದ ತಮಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ರಾಜ್ಯಪಾಲರಲ್ಲಿ ಮನವಿ ಮಾಡಿಕೊಂಡಿದ್ದರು. ಇದರ ಜೊತೆಗೆ, ಪೀಪಲ್ಸ್​ ಕಾನ್ಫರೆನ್ಸ್​ನ ನಾಯಕ ಸಜದ್​ ಲೋನೆ​ ಕೂಡ ಬಿಜೆಪಿ ಶಾಸಕರು ತಮಗೆ ಬೆಂಬಲ ನೀಡಿದ್ದು, ತಮ್ಮ ಬಳಿ ಅಗತ್ಯ ಬಹುಮತವಿದೆ. ಹಾಗಾಗಿ, ಸರ್ಕಾರ ರಚಿಸಲು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದರು.

ಸರ್ಕಾರ ರಚನೆಯ ವಿಷಯವಾಗಿ ಎರಡು ಪಕ್ಷಗಳ ನಡುವೆ ಪೈಪೋಟಿ ನಡೆದ ಕಾರಣ ರಾಜ್ಯಪಾಲರು ಯಾರಿಗೂ ಅವಕಾಶ ನೀಡದೆ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ. ಈ ಕಾರಣದಿಂದ ಸರ್ಕಾರ ರಚಿಸಲು ಕಸರತ್ತು ನಡೆಸಿದ್ದ ಪಿಡಿಪಿ, ಕಾಂಗ್ರೆಸ್​, ಎನ್​ಸಿ ಪಕ್ಷಗಳಿಗೆ ಹಿನ್ನಡೆಯುಂಟಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ