ಗೃಹ ಕಚೇರಿ ಕೃಷ್ಣಾದ ಕಟ್ಟಡದ ಒಳಗಡೆ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ

ಬೆಂಗಳೂರು, ನ.22-ಗೃಹ ಕಚೇರಿ ಕೃಷ್ಣಾದ ಕಚೇರಿಯ ಕಟ್ಟಡದ ಒಳಗೆ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಪ್ರತಿ ಕಾರ್ಯಕ್ರಮದಲ್ಲೂ ಪದೇ ಪದೇ ಮಾಧ್ಯಮಗಳ ವಿರುದ್ಧ ಹರಿಹಾಯುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆಗಳು ನಡೆಯುವ ಕಟ್ಟಡದ ಒಳಗೆ ಮಾಧ್ಯಮದವರು ಪ್ರವೇಶಿಸುವಂತಿಲ್ಲ ಎಂದು ನಿರ್ಬಂಧ ವಿಧಿಸಿದ್ದಾರೆ.

ಮುಖ್ಯಮಂತ್ರಿಗಳ ಆದೇಶ ಆಧರಿಸಿ ಪೆÇಲೀಸ್ ಅಧಿಕಾರಿಗಳು ಬ್ಯಾರಿಕೇಡ್ ಹಾಕಿ ಮಾಧ್ಯಮದವರು ಕೃಷ್ಣಾ ಒಳಗೆ ಹೋಗದಂತೆ ತಡೆಯೊಡ್ಡಿದರು.
ಇಂದು ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಮುಖ್ಯಮಂತ್ರಿಯವರು ಅತ್ಯಂತ ಮಹತ್ವದ ಸಭೆ ನಡೆಸಿದರು. ಸಭೆಯ ನಡಾವಳಿಗಳನ್ನು ವರದಿ ಮಾಡಲು ಮಾಧ್ಯಮದವರು ಆಗಮಿಸಿದ್ದರು. ಕೃಷ್ಣಾದ ಪ್ರಾಂಗಣದೊಳಗೆ ಮೊದಲು ಪ್ರವೇಶ ನೀಡಲಾಯಿತು.ಕೃಷ್ಣಾದ ಕಚೇರಿಯ ಒಳಗೆ ಪ್ರವೇಶಿಸದಂತೆ ನಿರ್ಬಂಧಿಸಲಾಯಿತು.

ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ನಡೆಯುವ ಸಭೆ ಅತ್ಯಂತ ಮಹತ್ವದ್ದಾಗಿದ್ದರಿಂದ ಭದ್ರತೆ ಹೆಚ್ಚಿಸಲಾಗಿತ್ತು.

ಜಿಲ್ಲಾ ಪಂಚಾಯ್ತಿಯ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು ಬಂದಿದ್ದರಾದರೂ ಅವರನ್ನು ಒಳ ಬಿಡಲು ಆರಂಭದಲ್ಲಿ ಪೆÇಲೀಸರು ಹಿಂದೇಟು ಹಾಕಿದ್ದರು. ನಂತರ ಅವರನ್ನು ಸಂದರ್ಶನದ ಕೊಠಡಿಯಲ್ಲಿ ಕೂರಿಸಲಾಯಿತು. ಆದರೆ ಮಾಧ್ಯಮದವರನ್ನು ಮಾತ್ರ ಕಟ್ಟುನಿಟ್ಟಾಗಿ ಕಚೇರಿಯಿಂದ ಹೊರ ಇಡಲಾಯಿತು.

ಈಗಾಗಲೇ ವಿಧಾನಸೌಧದ ಪ್ರವೇಶಕ್ಕೆ ಸಾಕಷ್ಟು ಅಡೆತಡೆಗಳನ್ನು ನಿರ್ಮಿಸಿ ಮಾಧ್ಯಮದವರನ್ನು ವಿಧಾನಸೌಧದಿಂದ ಹೊರಗಿಡುವ ಪ್ರಯತ್ನಗಳು ನಡೆದಿವೆ. ಈಗ ಗೃಹ ಕಚೇರಿ ಕೃಷ್ಣಾದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ