ನವದೆಹಲಿ: ಪಾಕಿಸ್ತಾನದ ಕರ್ತಾರ್ ಪುರ ಗುರುದ್ವಾರಕ್ಕೆ ಭಾರತದಿಂದ ವಿಶೇಷ ಕಾರಿಡಾರ್ ನಿರ್ಮಾಣ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಈ ಮೂಲಕ ಸಿಖ್ಖರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಗುರು ನಾನಕ ದೇವ್ 550ನೇ ಜನ್ಮದಿನದ ಹಿನ್ನೆಲೆಯಲ್ಲಿಯೇ ಪ್ರಧಾನಿ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಕುರಿತು ಟ್ವೀಟರ್ ನಲ್ಲಿ ಮಾಹಿತಿ ನೀಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಸಿಖ್ ರ ಪವಿತ್ರ ಯಾತ್ರಾಸ್ಥಳ ಪಾಕಿಸ್ತಾನದ ರಾವಿ ನದಿ ತೀರದಲ್ಲಿರುವ ಕರ್ತಾರ್ ಪುರ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ತೆರಳಲು ಯಾತ್ರಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಂಜಾಬಿನ ಅಂತರಾಷ್ಟ್ರೀಯ ಗಡಿಯಲ್ಲಿನ ಗುರುದಾಸ್ ಪುರ ಜಿಲ್ಲೆ ಡೇರಾ ಬಾಬಾ ನಾನಕ್ ನಿಂದ ವಿಶೇಷ ಕಾರಿಡಾರ್ ನಿರ್ಮಾಣ ಮಾಡಲಾಗುವುದು. ಇದಕ್ಕೆ ಕೇಂದ್ರ ಸಂಪುಟ ಸಮ್ಮತಿ ನೀಡಿದೆ ಎಂದು ಹೇಳಿದ್ದಾರೆ.
ಈ ಕಾರಿಡಾರ್ ಅಭಿವೃದ್ದಿಗೆ ಕೇಂದ್ರ ಸರ್ಕಾರದ ನಿಧಿಯನ್ನೇ ಬಳಸಲಾಗುತ್ತಿದ್ದು, ಎಲ್ಲಾ ರೀತಿಯ ಆಧುನಿಕ ಸೌಕರ್ಯಗಳು ಮತ್ತು ಸೌಲಭ್ಯಗಳನ್ನು ಹೊಂದಿರುವ ಕಾರಿಡಾರ್ ಇದಾಗಲಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಪಾಕ್ ಸರ್ಕಾರದೊಂದಿಗೂ ತಾವು ಮಾತುಕತೆ ನಡೆಸಿದ್ದು, ಸಿಖ್ಖರ ಧಾರ್ಮಿಕಭಾವನೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಪಾಕ್ ಆಡಳಿತದ ಪ್ರದೇಶದಲ್ಲಿ ಭಾರತ ಕಾರಿಡಾರ್ ಅಭಿವೃದ್ದಿಗೆ ನೆರವಾಗಲಿದೆ ಎಂದೂ ಹೇಳಿದ್ದಾರೆ.
Kartarpur Corridor,Pak Gurudwara,PM Modi Cabinet