ಬಡವರ ಬಂಧು ಯೋಜನೆ ಮೂಲಕ ಸಾಲ ಪಡೆಯಲು ಆಧಾರ್ ನೀಡಿದರೆ ಸಾಕು

ಬೆಂಗಳೂರು, ನ.22-ಬಡವರ ಬಂಧು ಯೋಜನೆ ಮೂಲಕ ಸಣ್ಣ ವ್ಯಾಪಾರಿಗಳು ಸಾಲ ಪಡೆಯಲು ಕೇವಲ ಆಧಾರ್ ನೀಡಿದರೆ ಸಾಕು. ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ 5 ಸಾವಿರ ಮಂದಿಗೆ 2 ರಿಂದ 10 ಸಾವಿರ ರೂ.ಗಳವರೆಗೆ ಸಾಲ ನೀಡಲಾಗುತ್ತದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ತಿಳಿಸಿದರು.

ಯಶವಂತಪುರದ ಎಪಿಎಂಸಿ ಯಾರ್ಡ್‍ನಲ್ಲಿಂದು ಸರ್ಕಾರದ ಮಹತ್ವಾಕಾಂಕ್ಷಿ ಬಡವರ ಬಂಧು ಯೋಜನೆಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ 53 ಸಾವಿರ ವ್ಯಾಪಾರಿಗಳಿಗೆ ಕಿರು ಸಾಲ ನೀಡಲಾಗುವುದು ಎಂದು ಹೇಳಿದರು.

ಬೆಂಗಳೂರಿನಲ್ಲಿ 80 ಸಾವಿರ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಇದರಲ್ಲಿ ಕೇವಲ 20 ಸಾವಿರ ವ್ಯಾಪಾರಿಗಳಿಗೆ ಬಿಬಿಎಂಪಿ ಗುರುತಿನ ಚೀಟಿ ನೀಡಿದೆ.ಉಳಿದವರಿಗೂ ತಕ್ಷಣ ಗುರುತಿನ ಚೀಟಿ ನೀಡಬೇಕೆಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೇಯರ್ ಗಂಗಾಂಬಿಕೆ ಅವರಿಗೆ ಸಚಿವರು ಸೂಚಿಸಿದರು.
ರಾಜಾಜಿನಗರ ಸಹಕಾರಿ ಬ್ಯಾಂಕ್, ಡಿಸಿಸಿ ಬ್ಯಾಂಕ್ ಸೇರಿದಂತೆ 9 ಬ್ಯಾಂಕ್‍ಗಳು ಈ ಯೋಜನೆ ಅನುಷ್ಠಾನಗೊಳಿಸಲು ಮುಂದೆ ಬಂದಿವೆ. ಸಣ್ಣ ವ್ಯಾಪಾರಿಗಳ ಬೆಳವಣಿಗೆಗಾಗಿ ಬಡ್ಡಿ ರಹಿತ ಸಾಲ ನೀಡಲಾಗುವುದು. ಪ್ರತಿ ಜಿಲ್ಲೆಯಲ್ಲೂ ಬಡವರ ಬಂಧು ಯೋಜನೆ ಜಾರಿಗೆ ಬರಲಿದೆ.ಮುಂದಿನ ದಿನಗಳಲ್ಲಿ ತಾಲೂಕು ಮತ್ತು ಹೋಬಳಿ ಮಟ್ಟದಲ್ಲೂ ಇದನ್ನು ವಿಸ್ತರಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಪ್ರತಿ ಜಿಲ್ಲೆಯಲ್ಲೂ ಈ ಯೋಜನೆ ಉಸ್ತುವಾರಿಯನ್ನಾಗಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗುತ್ತದೆ.ಸಂಚಾರಿ ಬ್ಯಾಂಕ್ ಮೂಲಕ ಸಣ್ಣ ವ್ಯಾಪಾರಿಗಳಿಗೆ ಸ್ಥಳದಲ್ಲೇ ಸಾಲ ನೀಡಲಾಗುತ್ತದೆ.ಈ ಯೋಜನೆಗೆ ನೋಂದಣಿ ಮಾಡಿಸಿಕೊಂಡವರು ಕೇವಲ ಆಧಾರ್ ನೀಡಿ ಸಾಲ ಪಡೆಯಬಹುದು.ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಿ ಸಾಲವನ್ನು ಮರುಪಾವತಿಸಿದರೆ ಒಳಿತಾಗಲಿದೆ ಎಂದು ತಿಳಿಸಿದರು.

ಮುಂದಿನ ತಿಂಗಳು ಪ್ರತಿ ಹಳ್ಳಿಯಲ್ಲೂ ಉದ್ಯೋಗ ಸೃಷ್ಟಿ ಮಾಡುವ ಕಾಯಕ ಯೋಜನೆಗೆ ಚಾಲನೆ ನೀಡಲಾಗುತ್ತದೆ.ಅದೇ ರೀತಿ ರೈತರಿಗೆ 10-15 ಲಕ್ಷ ರೂ.ಸಾಲ ನೀಡುವ ಯೋಜನೆಗೂ ಚಾಲನೆ ನೀಡಲಾಗುವುದು ಎಂದು ಹೇಳಿದರು.

ನಮ್ಮದು ರೈತ ಪರ ಸರ್ಕಾರ.22 ಸಾವಿರ ರೈತರ ಸಾಲ ಮನ್ನಾ ಆಗಿದೆ. ಹಿಂದಿನ ಸರ್ಕಾರದ 8,165 ಕೋಟಿ ರೂ.ಸಾಲ ಪಾವತಿಸಲಾಗಿದೆ. ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದ ಮೇಲೆ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ 45 ಸಾವಿರ ಕೋಟಿ ರೂ. ಸಾಲವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ