ಜನರಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮತ್ತು ತಪಾಸಣೆ ನಡೆಸಿ ರೋಗ ಪತ್ತೆ ಹಚ್ಚುವ ಉದ್ದೇಶಕ್ಕೆ ಬಿಇಎಲ್ ನಿಂದ ಕಿದ್ವಾಯಿ ಆಸ್ಪತ್ರೆಗೆ ಕ್ಯಾನ್ಸರ್ ಡಿಟೆಕ್ಷನ್ ಕ್ಲಿನಿಕ್ ಬಸ್ ಕೊಡುಗೆ

ಬೆಂಗಳೂರು, ನ.22-ರಾಜ್ಯದ ಗ್ರಾಮೀಣ ಭಾಗದ ಜನರಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜನರನ್ನು ತಪಾಸಣೆಗೊಳಪಡಿಸಿ ರೋಗ ಪತ್ತೆ ಹಚ್ಚುವ ಉದ್ದೇಶದಿಂದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಿದ್ವಾಯಿ ಆಸ್ಪತ್ರೆಗೆ ಕ್ಯಾನ್ಸರ್ ಡಿಟೆಕ್ಷನ್ ಕ್ಲಿನಿಕ್ ಬಸ್‍ನ್ನು ಕೊಡುಗೆ ನೀಡಿದೆ.
ಈ ಬಸ್‍ನ್ನು 2.50 ಕೋಟಿ ರೂ.ವೆಚ್ಚದಲ್ಲಿ ವಿಶೇಷವಾಗಿ ತಯಾರಿಸಲಾಗಿದೆ. ಇದರಲ್ಲಿ ಕ್ಯಾನ್ಸರ್ ತಪಾಸಣೆ ಮಾಡುವ ಸಾಧನಗಳು ಹಾಗೂ ಪುಟ್ಟ ಕ್ಲಿನಿಕ್ ಮಾದರಿ ವ್ಯವಸ್ಥೆ ಕಲ್ಪಿಸಲಾಗಿದೆ.

ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ರಾಮಚಂದ್ರ ಅವರಿಗೆ ಬಿಇಎಲ್ ವ್ಯವಸ್ಥಾಪಕ ಶಿವಕುಮಾರನ್‍ನ ಅವರು ಈ ಅತ್ಯಾಧುನಿಕ ಸೌಲಭ್ಯವುಳ್ಳ ವಿಶೇಷ ಸಂಚಾರಿ ಕ್ಲಿನಿಕ್ ಬಸ್‍ನ್ನು ಹಸ್ತಾಂತರಿಸಿದರು.

ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ಕ್ಯಾನ್ಸರ್ ರೋಗಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಿದೆ. ಸಾವಿನ ಸಂಖ್ಯೆಯೂ ಅಧಿಕ ವಾಗುತ್ತಿದೆ.ಜನರಲ್ಲಿ ಅರಿವಿನ ಕೊರತೆ ಇರುವುದರಿಂದ ರೋಗ ದ್ವಿಗುಣವಾಗಲು ಕಾರಣವಾಗಿದೆ ಎಂದು ಕಿದ್ವಾಯಿ ನಿರ್ದೇಶಕ ಡಾ.ಸಿ.ರಾಮಚಂದ್ರ ಅಭಿಪ್ರಾಯಪಟ್ಟರು.

ಕಿದ್ವಾಯಿ ಸಂಸ್ಥೆ ವತಿಯಿಂದ ಹಲವಾರು ಗ್ರಾಮಗಳಲ್ಲಿ ಕ್ಯಾನ್ಸರ್ ಕುರಿತ ಜಾಗೃತಿ ಕ್ಯಾಂಪ್‍ಗಳನ್ನು ಹಮ್ಮಿಕೊಂಡು ಜನರಲ್ಲಿ ಈ ರೋಗದ ಬಗ್ಗೆ ಅರಿವು ಮೂಡಿಸಲಾಗುತ್ತದೆ.ಇದಕ್ಕೆ ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ಅತ್ಯಾಧುನಿಕ ಸಲಕರಣೆಗಳುಳ್ಳ ಬಸ್ ನೀಡಿರುವುದು ಬಹಳ ಉಪಯೋಗವಾಗಲಿದೆ.ಇದಕ್ಕೆ ನಾವು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಹೇಳಿದರು.

ಶೀಘ್ರದಲ್ಲೇ ಕ್ಯಾನ್ಸರ್ ಇರುವುದನ್ನು ಪತ್ತೆ ಹಚ್ಚಿದರೆ ಅದಕ್ಕೆ ಸರಿಯಾದ ಚಿಕಿತ್ಸೆ ನೀಡಿ ರೋಗಿಯನ್ನು ಉಳಿಸಬಹುದು. ಆದರೆ ಗ್ರಾಮೀಣ ಜನರಲ್ಲಿ ಇದರ ಬಗ್ಗೆ ಅಷ್ಟಾಗಿ ಅರಿವು ಇರದ ಕಾರಣ ಕೊನೆಯ ಹಂತದಲ್ಲಿ ನಮ್ಮಲ್ಲಿಗೆ ಬರುತ್ತಾರೆ. ಆಗ ನಮ್ಮ ಕೈಲಾದ ಚಿಕಿತ್ಸೆಯನ್ನು ನೀಡುತ್ತೇವೆ.ಆದರೆ ರೋಗ ಉಲ್ಬಣಗೊಂಡಿದ್ದರೆ ಅವರನ್ನು ಉಳಿಸುವುದು ಕಷ್ಟವಾಗುತ್ತದೆ. ಹಾಗಾಗಿ ಪ್ರತಿ ಗ್ರಾಮದಲ್ಲೂ ಕ್ಯಾನ್ಸರ್ ತಪಾಸಣೆ ಮಾಡುವುದಲ್ಲದೆ, ಅವರಿಗೆ ಜಾಗೃತಿ ಮೂಡಿಸಿ ಚಿಕಿತ್ಸೆ ಕೊಡಲು ಉದ್ದೇಶಿಸಿದ್ದೇವೆ ಎಂದು ಡಾ.ಸಿ.ರಾಮಚಂದ್ರ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ