ಬೆಂಗಳೂರು, ನ.20-ಸ್ವಾತಂತ್ರ್ಯ ಹೋರಾಟಗಾರ, ವೀರ ಸೇನಾನಿ ಟಿಪ್ಪು ಹೆಸರಿನಲ್ಲಿ ಒಂದು ಕೋಟಿ ರೂ.ಮೊತ್ತದ ಪ್ರಶಸ್ತಿ ಮೀಸಲಿಡಬೇಕು, ಜಾತ್ಯತೀತವಾಗಿ ಹೋರಾಟ ಮಾಡಿರುವವರನ್ನು ಗುರುತಿಸಿ ಈ ಪ್ರಶಸ್ತಿಯನ್ನು ಸರ್ಕಾರ ಪ್ರದಾನ ಮಾಡಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.
ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟಿಷರ ನಿದ್ದೆಗೆಡಿಸಿದ್ದ ಮಹಾವೀರ ಟಿಪ್ಪು ಜನ್ಮದಿನವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಬೇಕು, ಪ್ರಧಾನಿ, ರಾಷ್ಟ್ರಪತಿಯವರು ಭಾಗವಹಿಸಬೇಕು ಎಂದು ಹೇಳಿದರು.
ಟಿಪ್ಪು ಅವರ ಸ್ವಾತಂತ್ರ್ಯ ಹೋರಾಟವನ್ನು ಗಮನಿಸಿ ಬ್ರಿಟಿಷರ ವಿರುದ್ಧ ಮಾಡಿದ ಯುದ್ಧ, ಅವರ ಆಡಳಿತ ಸುಧಾರಣಾ ಕ್ರಮಗಳನ್ನು ಪರಿಗಣಿಸಿ ಸಂಸತ್ ಭವನದ ಮುಂದೆ ಪ್ರತಿಮೆ ಸ್ಥಾಪನೆ ಮಾಡಬೇಕೆಂದು ಹೇಳಿದರು.
ಬ್ರಿಟಿಷರ ವಿರುದ್ಧ ಹೋರಾಡುವ ಸಂದರ್ಭದಲ್ಲಿ ತನ್ನ ಎರಡು ಮಕ್ಕಳನ್ನು ಒತ್ತೆಯಿಟ್ಟಿದ್ದ, ಚರಿತ್ರೆಯಲ್ಲಿ ದಾಖಲಾಗಿರುವ ಅವರ ಸಾಧನೆಗಳನ್ನು ಹೆಚ್ಚು ಪ್ರಚಾರ ಪಡಿಸಬೇಕು.ದಲಿತರು, ಬಡವರು, ಹಿಂದುಳಿದವರ ಪರವಾಗಿ ಟಿಪ್ಪು ಸುಲ್ತಾನ್ ಆಡಳಿತ ನಡೆಸಿದ್ದರು. ಎಲ್ಲಾ ದೇವಾಲಯಗಳಿಗೆ ಸಾಕಷ್ಟು ದತ್ತಿಗಳನ್ನು ನೀಡುತ್ತಿದ್ದರು.ಇಂತಹ ಮಹಾನ್ ವೀರನನ್ನು ನಾವು ಸ್ಮರಿಸಬೇಕು ಎಂದು ಅವರು ಹೇಳಿದರು.
ಮುಖಂಡರಾದ ಟಿ.ಪಿ.ಪ್ರಸನ್ನಕುಮಾರ್, ಗಿರೀಶ್ಗೌಡ, ಮುಬಾರಕ್, ತನ್ವೀರ್, ನಾರಾಯಣಸ್ವಾಮಿ, ಪುಟ್ಟೇಗೌಡ, ಪಾರ್ಥಸಾರಥಿ ಮತ್ತಿತರರು ಉಪಸ್ಥಿತರಿದ್ದರು.