ರೈತರಿಗೆ ಬಾಕಿ ಉಳಿಸಿಕೊಂಡಿರುವ ಸಕ್ಕರೆ ಪ್ಯಾಕ್ಟರಿಯ ಮಾಲೀಕರ ವಿರುದ್ಧ ಕ್ರಮಕೈಗೊಳ್ಳುವಂತೆ ಬಿಜೆಪಿ ರಾಜ್ಯಾಧ್ಯಕರ ಅಗ್ರಹ

ಬೆಂಗಳೂರು, ನ.20-ರೈತರಿಗೆ ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಯವರು ಯಾರೇ ಆಗಿದ್ದರೂ ಅಂಥವರ ವಿರುದ್ಧ ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕು, ಈ ವಿಷಯದಲ್ಲಿ ಸರ್ಕಾರಕ್ಕೆ ನಮ್ಮ ಬೆಂಬಲವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆ ಮಾಲೀಕರು ಯಾವುದೇ ಪಕ್ಷದಲ್ಲಿದ್ದರೂ ಕ್ರಮಕೈಗೊಳ್ಳಬೇಕು. ಈ ವಿಷಯದಲ್ಲಿ ಸರ್ಕಾರ ಹಿಂದೆ-ಮುಂದೆ ನೋಡಬಾರದುಎಂದು ಅವರು ಹೇಳಿದರು.

ಸಂಕಷ್ಟದಲ್ಲಿರುವ ಕಬ್ಬು ಬೆಳೆಗಾರರ ಸಮಸ್ಯೆಗೆ ಸರ್ಕಾರ ತಕ್ಷಣ ಸ್ಪಂದಿಸಬೇಕಿತ್ತು.ಇದೇ ವೇಳೆ ಸಕ್ಕರೆ ಕಾರ್ಖಾನೆ ಮಾಲೀಕರು ಕೂಡ ರೈತರ ನೆರವಿಗೆ ಮುಂದಾಗಬೇಕಿತ್ತು ಎಂದು ಹೇಳಿದರು.

ನಾಳೆಯಿಂದ ರಾಜ್ಯಾದ್ಯಂತ ಹೋರಾಟ:
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಐದಾರು ತಿಂಗಳು ಕಳೆದರೂ ರೈತರ ಸಮಸ್ಯೆ ನಿವಾರಿಸುವಲ್ಲಿ ಹಾಗೂ ಬರ ಪರಿಸ್ಥಿತಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಸರ್ಕಾರದ ವೈಫಲ್ಯವನ್ನು ವಿರೋಧಿಸಿ ನಾಳೆಯಿಂದ ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.

ಸಾಲ ಮನ್ನಾ ಯೋಜನೆ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದೆ. ಇದುವರೆಗೂ ಒಬ್ಬನೇ ಒಬ್ಬ ರೈತನ ಸಾಲ ಮನ್ನಾ ಆಗಿಲ್ಲ. ಸಹಕಾರ ಬ್ಯಾಂಕ್‍ಗಳಲ್ಲಿ ರೈತರು ಪಡೆದ ಸಾಲ ಕೂಡ ಮನ್ನಾ ಆಗಿಲ್ಲ. ರಾಷ್ಟ್ರೀಕೃತ ಬ್ಯಾಂಕ್‍ಗಳು ರೈತರಿಗೆ ನೋಟೀಸ್ ನೀಡುತ್ತಿವೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಇದುವರೆಗೂ ಎಷ್ಟು ಸಾಲ ಮನ್ನಾ ಆಗಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ ಯಡಿಯೂರಪ್ಪ, ಇದೇ ವಿಷಯ ಮುಂದಿಟ್ಟುಕೊಂಡು ಬೆಳಗಾವಿ ಅಧಿವೇಶನದ ಒಳಗೆ ಹಾಗೂ ಹೊರಗೆ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ರಾಜ್ಯದ 100 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಆದರೆ ಇದುವರೆಗೂ ಯಾವೊಬ್ಬ ಸಚಿವರೂ ಈ ಜಿಲ್ಲೆಗಳಿಗೆ ಭೇಟಿ ನೀಡಿಲ್ಲ. ವಿಧಾನಸೌಧಕ್ಕೂ ಬರುತ್ತಿಲ್ಲ. ಅಧಿಕಾರಿಗಳ ಸಭೆಯನ್ನೂ ನಡೆಸಿಲ್ಲ. ನಾವು ಐದು ತಿಂಗಳ ಕಾಲ ಸುಮ್ಮನಿದ್ದೆವು. ಆದರೆ ಸರ್ಕಾರ ಇನ್ನೂ ಕಾರ್ಯಪ್ರವೃತ್ತವಾಗಿಲ್ಲ, ಆದ್ದರಿಂದ ಅನಿವಾರ್ಯವಾಗಿ ಬೀದಿಗಿಳಿದು ಹೋರಾಟ ನಡೆಸಲು ಮುಂದಾಗಿದ್ದೇವೆ ಎಂದರು.

ರೈತ ಮಹಿಳೆ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಪಮಾನಕಾರಿಯಾಗಿ ಮಾತನಾಡಿದ್ದಾರೆ. ಈ ಮೂಲಕ ಇಡೀ ಮಹಿಳಾ ಕುಲಕ್ಕೆ ಅಪಮಾನ ಮಾಡಿದ್ದಾರೆ.ರಾಜ್ಯದ ಯಾವ ಮುಖ್ಯಮಂತ್ರಿಗಳೂ ಈ ರೀತಿ ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಿಲ್ಲ. ತಾವು ಆಡಿದ ಮಾತಿಗೆ ಕುಮಾರಸ್ವಾಮಿಯವರು ಕ್ಷಮಾಪಣೆ ಕೇಳುವ ಬದಲು ಅದನ್ನು ಸಮರ್ಥಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮಂತ್ರಿ ಸ್ಥಾನ ಕೇಳಲು ನಾನು ಕುಮಾರಸ್ವಾಮಿ ಅವರ ಮನೆಗೆ ಹೋಗಿದ್ದೆ ಎಂದು ಅವರು ಆರೋಪಿಸಿದ್ದಾರೆ.ಈ ರೀತಿ ಆರೋಪ ಮಾಡುವುದಕ್ಕೆ ಕುಮಾರಸ್ವಾಮಿಯವರಿಗೆ ನಾಚಿಕೆಯಾಗಬೇಕು.ಯಾವಾಗ ನಾನು ಅವರ ಮನೆಗೆ ಭೇಟಿ ನೀಡಿದ್ದೆ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು ಎಂದು ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದರು.

ಕುಮಾರಸ್ವಾಮಿಯವರು ಅವರ ಪಕ್ಷ ಉಳಿಸಿಕೊಳ್ಳಲು ಬಿಜೆಪಿಯವರೊಂದಿಗೆ ಮೈತ್ರಿ ಮಾಡಿಕೊಂಡಿದ್ದರು.ಒಪ್ಪಂದದಂತೆ 20 ತಿಂಗಳು ಮುಖ್ಯಮಂತ್ರಿ ಹುದ್ದೆಯನ್ನು ಅವರಿಗೆ ಬಿಟ್ಟುಕೊಟ್ಟಿದ್ದೆವು.ಆದರೆ ಬಳಿಕ ಅವರ ನನಗೆ ಮೋಸ ಮಾಡಿದರು ಎಂದು ಯಡಿಯೂರಪ್ಪ ಕಿಡಿಕಾರಿದರು.
ನಂಬಿಕೆ ಹಾಗೂ ಸಮಯಸಾಧಕತನಕ್ಕೆ ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿಯವರು ಹೇಳಿ ಮಾಡಿಸಿದ ಜೋಡಿ.ತಾವು ಹಣಕಾಸು ಸಚಿವರಾಗಿದ್ದಾಗ ರೈತರ ಸಾಲದ ಬಡ್ಡಿ ಕಡಿಮೆ ಮಾಡಿದ್ದೆ.ಆಗ ದೇವೇಗೌಡ ಅವರು ಈ ನಿರ್ಧಾರವನ್ನು ಯಾರನ್ನು ಕೇಳಿ ತೆಗೆದುಕೊಂಡಿರಿ ಎಂದು ನನಗೆ ಆವಾಜ್ ಹಾಕಿದ್ದರು ಎಂದು ಹೇಳಿದರು.

ವಿರೋಧ ಪಕ್ಷ ಎಂಬ ನೆಲೆಯಲ್ಲಿ ಬೆಳಗಾವಿ ರೈತರಿಗೆ ಬೆಂಬಲ ನೀಡಿದ್ದೇವೆ. ಇದರಲ್ಲಿ ರಾಜಕೀಯ ಲಾಭ-ನಷ್ಟದ ಪ್ರಶ್ನೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಗೋವಿಂದ ಕಾರಜೋಳ, ಸಂಸದರಾದ ಪಿ.ಸಿ.ಮೋಹನ್, ಶೋಭಾಕರಂದ್ಲಾಜೆ, ಶಾಸಕರಾದ ಎಸ್.ಆರ್.ವಿಶ್ವನಾಥ್, ಅಶ್ವಥ್‍ನಾರಾಯಣ್, ಮುಖಂಡರಾದ ತೇಜಸ್ವಿನಿ, ಶಿವರಾಮ್ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ