ರೈತ ಮಹಿಳೆ ವಿರುದ್ಧ ಸಿ.ಎಂ. ಯಾವುದೇ ಆಕ್ಷೇಪಾರ್ಹ ಹೇಳಿಕೆ ನೀಡಿಲ್ಲ

ಬೆಂಗಳೂರು, ನ.20-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತ ಮಹಿಳೆ ಬಗ್ಗೆ ಯಾವುದೇ ರೀತಿಯ ಆಕ್ಷೇಪಾರ್ಹ ಹೇಳಿಕೆ ನೀಡಿಲ್ಲ. ಆದರೆ ಬಿಜೆಪಿಯವರು ವಿನಾಕಾರಣ ವಿವಾದ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಹೇಳಿದ್ದಾರೆ.

ಯಾರನ್ನು ನೋಯಿಸುವ ಉದ್ದೇಶದಿಂದ ಸಿಎಂ ಈ ರೀತಿಯ ಹೇಳಿಕೆ ನೀಡಿಲ್ಲ ಎಂದ ಅವರು, ಕಳೆದ ನಾಲ್ಕು ವರ್ಷಗಳಿಂದ ರಾಜ್ಯದ ಪ್ರಭಾವಿ ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ನೀಡಬೇಕಿರುವ ಬಾಕಿಯನ್ನು ಪಾವತಿಸದೆ ತೊಂದರೆಕೊಟ್ಟಿದ್ದಾರೆ. ಆ ಸಂದರ್ಭದಲ್ಲಿ ಸುಮ್ಮನಿದ್ದ ಬಿಜೆಪಿಯವರು ಈಗ ಮಾತ್ರ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಸರ್ಕಾರದ ವಿರುದ್ಧ ಹೋರಾಟಕ್ಕೆ ಕುಮ್ಮಕ್ಕು ನೀಡುವ ಬಿಜೆಪಿ ಧೋರಣೆಯನ್ನು ನಾವು ಖಂಡಿಸುತ್ತೇವೆ. ರಾಜ್ಯ ಸರ್ಕಾರಕ್ಕೆ ರೈತ ಹಿತಾಸಕ್ತಿ ಕಾಪಾಡುವ ಇಚ್ಛಾಶಕ್ತಿ ಇದೆ.ರೈತರ ಹಿತ ಬಲಿ ಕೊಟ್ಟು ಸರ್ಕಾರ ನಡೆಸುವ ನಿರ್ಲಕ್ಷ್ಯ ಧೋರಣೆ ಸಮ್ಮಿಶ್ರ ಸರ್ಕಾರಕ್ಕಿಲ್ಲ ಎಂದು ಹೇಳಿದರು.

ಎಲ್ಲಾ ಹಂತದಲ್ಲೂ ಅನ್ನದಾತನ ನೋವಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಾ ಬಂದಿರುವ ಸರ್ಕಾರ ರೈತರನ್ನು ಸಾಲದಿಂದ ಮುಕ್ತಗೊಳಿಸಲು ಮುಂದಾಗಿದೆ.ಇನ್ನು ಕಬ್ಬು ಬೆಳೆಗಾರರ ಬಾಕಿ ಪಾವತಿಗೆ ಸೂಕ್ತ ಕ್ರಮವಹಿಸಲು ಸರ್ಕಾರ ಶಕ್ತವಾಗಿದೆ.ಅವರ ಸಮಸ್ಯೆಯನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ