ಬೆಂಗಳೂರು,ನ.20- ಸರ್ಕಾರದ ಪ್ರಮುಖ ಸಭೆ ಹಾಗೂ ಸಚಿವರ ಸುದ್ದಿಗೋಷ್ಠಿಗಳನ್ನು ವಾರ್ತಾ ಭವನದ ಮಾಧ್ಯಮ ಕೇಂದ್ರದಲ್ಲಿ ನಡೆಸಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿನ ಮಹತ್ಮಾಗಾಂಧೀಜಿ ಮಾಧ್ಯಮ ಕೇಂದ್ರ ಹಾಗೂ ವಾರ್ತಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಅತ್ಯಾಧುನಿಕವಾಗಿ ನಿರ್ಮಿಸಲಾಗಿರುವ ಮಾಧ್ಯಮ ಕೇಂದ್ರದಲ್ಲಿ ಎಲ್ಲ ರೀತಿಯ ಮೂಲಸೌಕರ್ಯಗಳು ಇವೆ. ಇತ್ತೀಚೆಗೆ ವಿಧಾನಸೌಧದಲ್ಲಿ ಭದ್ರತಾ ವ್ಯವಸ್ಥೆ ಹೆಚ್ಚಿರುವುದರಿಂದ ಇಂತಹ ಸಭೆ ಹಾಗೂ ಸುದ್ದಿಗೋಷ್ಠಿಗಳನ್ನು ಮಾಧ್ಯಮ ಕೇಂದ್ರದಲ್ಲಿ ಆಯೋಜಿಸುವ ಮೂಲಕ ಮಾಧ್ಯಮದವರಿಗೂ ಅನುಕೂಲ ಕಲ್ಪಿಸಬಹುದು. ಈ ನಿಟ್ಟಿನಲ್ಲಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದರು.
3.60 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮಾಧ್ಯಮ ಕೇಂದ್ರ ಸದ್ಬಳಕೆಯಾಗಬೇಕಿದೆ ಎಂದ ಅವರು,ಸರ್ಕಾರದ ಕಾರ್ಯಕ್ರಮಗಳು ಹಾಗೂ ಸಾಧನೆಗಳನ್ನು ಪ್ರಚುರಪಡಿಸುವಲ್ಲಿ ವಾರ್ತಾ ಇಲಾಖೆ ಸರ್ಕಾರದ ಕೊಂಡಿಯಾಗಿ ಕೆಲಸ ಮಾಡುತ್ತಿದೆ. ರಾಜ್ಯದ ವಾರ್ತಾ ಭವನ ಉತ್ತಮ ಕೆಲಸ ನಿರ್ವಹಿಸುತ್ತಿದೆ. ದೆಹಲಿ ನಂತರ ಅತ್ಯುತ್ತಮ ವಾರ್ತಾ ಭವನ ಬೆಂಗಳೂರಿನಲ್ಲಿದೆ. ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತಾವೇ ಇದರ ಉದ್ಘಾಟನೆಯನ್ನು ನೇರವೇರಿಸಿದ್ದೆವು ಎಂದು ಸ್ಮರಿಸಿದರು.
ಇದೀಗ ಮಹಾತ್ಮ ಗಾಂದೀಜಿ ಅವರ 150ನೇ ವರ್ಷಾಚರಣೆ ಸಂದರ್ಭದಲ್ಲಿ ಮಹಾತ್ಮಾಗಾಂಧಿ ಮಾಧ್ಯಮ ಕೇಂದ್ರವನ್ನು ಉದ್ಘಾಟಿಸುತ್ತಿದ್ದೇನೆ ಎಂದರು.
ವಾರ್ತಾ ಇಲಾಖೆಯ ಪುನರ್ ರಚನೆಗೆ ಸಂಬಂಧಿಸಿದಂತೆ ರಚಿಸಿರುವ ಎಂ.ಆರ್.ಶ್ರೀನಿವಾಸ್ಮೂರ್ತಿ ಅವರ ನೇತೃತ್ವದ ಸಮಿತಿ ನೀಡುವ ವರದಿಯನ್ನು ಅನುಷ್ಠಾನಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇಲಾಖೆಯಲ್ಲಿರುವ ಸಿಬ್ಬಂದಿಯ ಕೊರತೆ ಹಾಗೂ ಇನ್ನಿತರ ಸಮಸ್ಯೆ ಬಗೆಹರಿಸಲು ಯತ್ನಿಸುತ್ತೇವೆ ಎಂದು ಹೇಳಿದರು.
ವಾರ್ತಾ ಇಲಾಖೆಯ ನಿರ್ದೇಶಕ ವಿಶುಕುಮಾರ್ ಅವರು ಈ ತಿಂಗಳ ಅಂತ್ಯಕ್ಕೆ ನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಮುಖ್ಯಮಂತ್ರಿಗಳು ಅಭಿನಂದನೆ ಸಲ್ಲಿಸಿದರು.
ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಎಚ್.ಪಿ.ದಿನೇಶ್ ಮಾತನಾಡಿ, ವಾರ್ತಾ ಭವನವನ್ನು 2007ರಲ್ಲಿ ಉದ್ಘಾಟಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಕಾಕತಾಳೀಯ ಎಂಬಂತೆ ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಿದ್ದಾರೆ ಎಂದರು.
ರಾಜ್ಯದ 30 ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಾಣವನ್ನು ಚುರುಕುಗೊಳಿಸಬೇಕಿದೆ. ಇಂದು ಮಾಧ್ಯಮಗಳ ಜವಾಬ್ದಾರಿ ನೂರು ಪಟ್ಟು ಹೆಚ್ಚಾಗಿದೆ. ಆಧುನಿಕ ತಂತ್ರಜ್ಞಾನ ಅನುಸರಿಸಿ ಇಲಾಖೆ ಕಾರ್ಯ ನಿರ್ವಹಿಸಲು ಅನುವಾಗುವಂತೆ ಸಿಬ್ಬಂದಿಗಳ ಕೊರತೆ ನೀಗಿಸಲು ನೇಮಕಾತಿ ಮಾಡಬೇಕು ಎಂದು ತಿಳಿಸಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಆಯುಕ್ತರು ಸುಲಭವಾಗಿ ಸಿಗುತ್ತಿಲ್ಲ. ಮಾಧ್ಯಮ ಕೇಂದ್ರದಲ್ಲಿ ವಾರಕ್ಕೆ ಒಮ್ಮೆಯಾದರೂ ಬರುವಂತಾಗಬೇಕು, ಅಲ್ಲದೆ ಸಚಿವರು, ಸಚಿವರ ಪತ್ರಿಕಾ ಗೋಷ್ಠಿಗಳು ಇಲ್ಲಿ ನಡೆಸಲು ತೀರ್ಮಾನ ಕೈಗೊಳ್ಳುವುದರಿಂದ ಮಾಧ್ಯಮ ಕೇಂದ್ರದ ಸದುಪಯೋಗವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಇಲಾಖೆಯ ನಿರ್ದೇಶಕ ವಿಶುಕುಮಾರ್ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಜಂಟಿ ನಿರ್ದೇಶಕ ರವಿಕುಮಾರ್, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸಿದ್ದರಾಜು ಮತ್ತಿತರರು ಉಪಸ್ಥಿತರಿದ್ದರು.