ಇಸ್ರೇಲ್ ಪ್ರವಾಸ ಕೈಗೊಂಡಿರುವ ರೈತರಿಗೆ ಶುಭ ಹಾರೈಸಿದ ಸಿ.ಎಂ.

ಬೆಂಗಳೂರು,ನ.20-ಇಸ್ರೇಲ್‍ನ ಸುಧಾರಿತ ಕೃಷಿ ಪದ್ಧತಿ ಅಧ್ಯಯನ ಪ್ರವಾಸ ಕೈಗೊಂಡಿರುವ ಕೋಲಾರ ಮತ್ತು ರಾಮನಗರ ಜಿಲ್ಲೆಯ 50 ಮಂದಿ ರೈತರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಶುಭ ಹಾರೈಸಿದರು.

ರೇಷ್ಮೆ ಇಲಾಖೆ ನಿರ್ದೇಶಕ ಎಂ.ಕೆ.ಪ್ರಭಾಕರ್ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಅಧ್ಯಯನ ಪ್ರವಾಸಕ್ಕೆ ಇದೇ 22ರಂದು ತೆರಳುತ್ತಿದ್ದು 12 ದಿನಗಳ ಪ್ರವಾಸ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು.

ಈ ವೇಳೆ ರೈತರಿಗೆ ಶುಭ ಕೋರಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಆಧುನಿಕ ಕೃಷಿ ಪದ್ಧತಿಯ ಬಗ್ಗೆ ತಿಳಿದುಕೊಳ್ಳಲು ರೈತರು ಸ್ವಂತ ಖರ್ಚಿನಲ್ಲಿ ಇಸ್ರೇಲ್ ಪ್ರವಾಸ ಕೈಗೊಂಡಿರುವುದು ಸಂತೋಷ ತಂದಿದೆ. ಅವರಿಗೆ ಅಗತ್ಯವಿರುವ ರಾಯಭಾರಿ ಕಚೇರಿಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು.

ಕೋಲಾರದ 5 ಮಂದಿ ಅಧಿಕಾರಿಗಳು ಹಾಗೂ 7 ರೈತರು, ಬಂಗಾರಪೇಟೆಯ ಒಬ್ಬ ಅಧಿಕಾರಿ ಮತ್ತು 21 ರೈತರು, ಮಾಲೂರಿನ ಒಬ್ಬ ಅಧಿಕಾರಿ, ಒಬ್ಬ ರೈತ, ಶ್ರೀನಿವಾಸಪುರದಿಂದ ಒಬ್ಬ ಅಧಿಕಾರಿ, ಮೂವರು ರೈತರು, ಮಾಗಡಿಯ ಒಬ್ಬ ಅಧಿಕಾರಿ , ಎಂಟು ರೈತರು ಇದೇ 22ರ ಗುರುವಾರ ರಾತ್ರಿ ಇಸ್ರೇಲ್‍ಗೆ ತೆರಳಲಿದ್ದಾರೆ.

12 ದಿನಗಳ ಕೃಷಿ ಅಧ್ಯಯನ ಪ್ರವಾಸದಲ್ಲಿ ಕಡಿಮೆ ನೀರು ಬಳಸಿ ಬೆಳೆ ಬೆಳೆಯುವುದು ಸೇರಿದಂತೆ ಇನ್ನಿತರ ಸುಧಾರಿತ ಆಧುನಿಕ ಕೃಷಿ ಪ್ದಧತಿ ಅಳವಡಿಸಿಕೊಂಡಿರುವುದನ್ನು ಅಧ್ಯಯನ ಮಾಡಲಿದ್ದಾರೆ.
ಈ ಬಗ್ಗೆ ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಅಧ್ಯಯನ ನಡೆಸಿ ಬಂದು ತಿಳಿಸಿದ್ದರು.ಇದರಿಂದ ಉತ್ತೇಜಿತರಾದ ರೈತರು ಪ್ರವಾಸಕ್ಕೆ ಅಣಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ