ಬೆಂಗಳೂರು,ನ.20- ಐದು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶದಲ್ಲಿ ಉಂಟಾದ ಹಿನ್ನಡೆ, ಕಬ್ಬು ಬೆಳೆಗಾರರ ಸಮಸ್ಯೆ, ಡಿಸೆಂಬರ್ನಲ್ಲಿ ಆರಂಭವಾಗಲಿರುವ ಬೆಳಗಾವಿ ಅಧಿವೇಶನ, ಸರ್ಕಾರದ ವಿರುದ್ಧ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಸಂಜೆ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ.
ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆಯಲಿರುವ ಈ ಸಭೆಗೆ ಕೋರ್ ಕಮಿಟಿ ಸದಸ್ಯರು ಭಾಗವಹಿಸಲಿದ್ದು, ಪಕ್ಷದೊಳಗಿನ ಇತ್ತೀಚಿನ ಬೆಳವಣಿಗೆಗಳು ಕುರಿತಂತೆ ಚರ್ಚೆ ನಡೆಯಲಿದೆ.
ಇತ್ತೀಚೆಗೆ ನಡೆದ ಶಿವಮೊಗ್ಗ, ಮಂಡ್ಯ, ಬಳ್ಳಾರಿ ಲೋಕಸಭಾ ಕ್ಷೇತ್ರಗಳ ಉಪಚುನಾವಣೆ, ರಾಮನಗರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲೂ ಪಕ್ಷಕ್ಕೆ ಉಂಟಾದ ಮುಖಭಂಗದ ಬಗ್ಗೆ ಆತ್ಮಾವಲೋಕನ ನಡೆಯಲಿದೆ.
ಪಕ್ಷದ ಭದ್ರಕೋಟೆ ಎನಿಸಿದ್ದ ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಜೆ.ಶಾಂತ ಭಾರೀ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದು, ಶಿವಮೊಗ್ಗದಲ್ಲಿ ಬಿಜೆಪಿಗೆ ನಿರೀಕ್ಷಿತ ಪ್ರಮಾಣದ ಮತಗಳು ಬಾರದೆ ಪ್ರಯಾಸದಿಂದ ಗೆಲುವು ಸಾಧಿಸಿರುವುದು, ಜಮಖಂಡಿಯಲ್ಲಿ ಉಂಟಾದ ಹಿನ್ನಡೆ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ಸುದೀರ್ಘ ಚರ್ಚೆ ನಡೆಯಲಿದೆ.
ಗೆಲ್ಲಬಹುದಾಗಿದ್ದ ಬಳ್ಳಾರಿ ಮತ್ತು ಜಮಖಂಡಿಯಲ್ಲಿ ವಿರೋಧ ಪಕ್ಷಗಳ ಕೈ ಮೇಲಾಗಲು ಪಕ್ಷದೊಳಗಿನ ಕೆಲವರು ಎದುರಾಳಿಗಳ ಜೊತೆ ಕೈ ಜೋಡಿಸಿರುವ ಸಾಧ್ಯತೆ ಇದೆ ಎಂಬ ಗುಸುಗುಸು ಕೇಳಿಬಂದಿತ್ತು. ಹೀಗಾಗಿಯೇ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂಬ ಮಾತು ಬಿಜೆಪಿ ವಲಯದಲ್ಲಿ ಹಬ್ಬಿದೆ.
ಅತಿಯಾದ ಆತ್ಮವಿಶ್ವಾಸ ಹಾಗೂ ಎದುರಾಳಿ ಪಕ್ಷದವರ ದೌರ್ಬಲ್ಯವನ್ನು ಅರಿಯದೆ ಇದ್ದುದ್ದರಿಂದ ಬಳ್ಳಾರಿಯಲ್ಲಿ ಪಕ್ಷಕ್ಕೆ ಭಾರೀ ಮುಖಭಂಗವಾಯಿತು.
ಚುನಾವಣಾ ಉಸ್ತುವಾರಿಯನ್ನು ಶಾಸಕ ಶ್ರೀರಾಮುಲು ಹೆಗಲಿಗೆ ನೀಡಿದ್ದರಿಂದ ನಿರೀಕ್ಷೆಗೂ ಮೀರಿದ ಸೋಲು ಅನುಭವಿಸಬೇಕಾಯಿತು.ಇದರಿಂದ ಪಕ್ಷಕ್ಕೆ ಭಾರೀ ಮುಖಭಂಗವೂ ಆಯಿತು. ಪಕ್ಷದೊಳಗಿನ ಆಂತರಿಕ ಜಗಳ, ಪರಸ್ಪರ ಕಿತ್ತಾಟ, ಒಬ್ಬರನ್ನೊಬ್ಬರು ನಂಬದಿರುವುದು, ಎಲ್ಲವನ್ನು ಅಪನಂಬಿಕೆಯಿಂದಲೇ ನೋಡುವ ಪ್ರವೃತ್ತಿ ಇದ್ದುದ್ದರಿಂದಲೇ ಸೋಲಾಗಿದೆ.
ಮುಂದಿನ ದಿನಗಳಲ್ಲಿ ಪಕ್ಷದೊಳಗೆ ಭಿನ್ನಮತಕ್ಕೆ ಅವಕಾಶವಿಲ್ಲದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನೆಡೆಸಬೇಕೆಂಬ ನಿಲುವಿಗೆ ವರಿಷ್ಠರು ಬರುವ ಸಾಧ್ಯತೆ ಇದೆ.
ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಘಡ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಯಾಗುವ ಸಂಭವವಿದೆ ಎಂಬ ನಿರೀಕ್ಷೆಯನ್ನು ಬಿಜೆಪಿ ನಾಯಕರು ಇಟ್ಟುಕೊಂಡಿದ್ದಾರೆ.
ಉಪಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾದ ಪರಿಣಾಮ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಭಿನ್ನಮತೀಯರನ್ನು ಸೆಳೆಯುವ ಪ್ರಯತ್ನವೂ ಸದ್ಯಕ್ಕೆ ಸ್ಥಗಿತಗೊಂಡಿದೆ.
ಪಂಚರಾಜ್ಯಗಳ ಫಲಿತಾಂಶ ಪ್ರಕಟಗೊಂಡ ನಂತರ ಏರುಪೇರಾಗುವ ಸಾಧ್ಯತೆ ಇರುವುದರಿಂದ ಯಾವುದಕ್ಕೂ ಆತುರದ ನಿರ್ಧಾರ ಕೈಗೊಳ್ಳದೆ ವರಿಷ್ಠರ ಸೂಚನೆಯಂತೆ ಪಕ್ಷವನ್ನು ಸಂಘಟಿಸುವ ಬಗ್ಗೆ ಚರ್ಚೆ ನಡೆಯಲಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೋರ್ ಕಮಿಟಿ ಸದಸ್ಯರಾದ ಪ್ರಹ್ಲಾದ್ ಜೋಷಿ, ಆರ್.ಅಶೋಕ್, ಡಿ.ವಿ.ಸದಾನಂದಗೌಡ, ನಳೀನ್ಕುಮಾರ್ ಕಟೀಲ್, ಬಿ.ಎಲ್.ಸಂತೋಷ್, ಕೆ.ಎಸ್.ಈಶ್ವರಪ್ಪ , ಬಸವರಾಜು ಬೊಮ್ಮಾಯಿ ಮತ್ತಿತರರು ಭಾಗವಹಿಸಲಿದ್ದಾರೆ.