ತಿರುವನಂತಪುರಂ: ಶಬರಿಮಲೆಯಲ್ಲಿ ನಿಷೇಧಾಜ್ನೆ ಜಾರಿಗೊಳಿಸಿ, ಅಯ್ಯಪ್ಪ ಭಕ್ತರನ್ನು ಬಂಧಿಸಿರುವ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಕೇಂದ್ರ ಪ್ರವಾಸೋದ್ಯಮ ರಾಜ್ಯ ಸಚಿವ ಕೆಜೆ ಆಲ್ಫಾನ್ಸ್, ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ತುರ್ತುಪರಿಸ್ಥಿತಿಗಿಂತ ಹೀನವಾದ ಸ್ಥಿತಿ ಎದುರಾಗಿದೆ. ಭಕ್ತರು ದೇವಾಲಯದೊಳಗೆ ಪ್ರವೇಶ ಪಡೆಯಲು ಅವಕಾಶ ಮಾಡಿಕೊಡುತ್ತಿಲ್ಲ. ಯಾವುದೇ ಕಾರಣವಿಲ್ಲದಿದ್ದರೂ ಸೆಕ್ಷನ್ 144 ಹೇರಿದ್ದಾರೆ. ಭಕ್ತರು ಭಯೋತ್ಪಾದಕರಲ್ಲ. ದೇವಸ್ಥಾನದ ಬಳಿ 15,000 ಪೊಲೀಸರನ್ನು ನಿಯೋಜಿಸಲಾಗಿದ್ದು, ಇದರ ಅವಶ್ಯಕತೆಯಾದರೂ ಏನು ಎಂದು ಪ್ರಶ್ನಿಸಿದ್ದಾರೆ.
ಅಯ್ಯಪ್ಪನ ಭಕ್ತರಿಗೆ ಕಿರುಕುಳ ನೀಡಲಾಗುತ್ತಿದೆ. ಭಕ್ತರು ಅಯ್ಯಪ್ಪನ ದರ್ಶನಕ್ಕೆ ಬಂದಿದ್ದಾರೆಯೇ ಹೊರತು ಭಯೋತ್ಪಾದನೆಗಾಗಿ ಬಂದಿಲ್ಲ. ಅಯ್ಯಪ್ಪ ಭಕ್ತರನ್ನು ಕೇರಳ ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ. ಅಯ್ಯಪ್ಪನ ದರ್ಶನಕ್ಕೆ ಬಂದವರನ್ನು ಬಂಧಿಸಲಾಗುತ್ತಿದೆ. ಇನ್ನು ಪವಿತ್ರ ಸ್ಥಳದಲ್ಲಿ ಸುಮಾರು 15 ಸಾವಿರ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಿರುವುದು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ ಎಂದರು.
2 ತಿಂಗಳ ಮಂಡಲ ಪೂಜೆ ನಿಮಿತ್ತ ಕಳೆದ ಶುಕ್ರವಾರ ಸಂಜೆ ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲು ತೆರೆಯಲಾಗಿದ್ದು, ಅಲ್ಲಿನ ಸಿದ್ಧತೆಗಳ ಪರಿಶೀಲನೆ ನಿಟ್ಟಿನಲ್ಲಿ ಕೇಂದ್ರ ಸಚಿವ ಆಲ್ಫಾನ್ಸ್ ಭೇಟಿ ನೀಡಿದ್ದರು. ವಾರ್ಷಿಕ ಮಂಡಲ ಪೂಜೆ ನಿಮಿತ್ತ ಶಬರಿಮಲೆಯಲ್ಲಿ ನಡೆಯುತ್ತಿರುವ ಸಿದ್ಧತಾ ಕಾರ್ಯಗಳ ಪರಿಶೀಲನೆ ನಡೆಸಿದ್ದೇನೆ. ಶೌಚಾಲಯ ನಿರ್ಮಾಣದ ಕುರಿತು ತಮಗೆ ಅಸಮಾಧಾನವಿದ್ದು, 6 ಅಡಿ ಎತ್ತರದಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಭಕ್ತರು ಹಾರಿಕೊಂಡು ಶೌಚಾಲಯಕ್ಕೆ ಹೋಗಲಾಗುತ್ತದೆಯೇ ಎಂದು ಕಿಡಿಕಾರಿದರು.
Union Minister K.J. Alphons, slams Kerala govt, Sabarimala