ಅಯ್ಯಪ್ಪನ ದರ್ಶನಕ್ಕೆ ಹೊರಟ 11 ಮಹಿಳೆಯರನ್ನು ತಡೆದ ಭಕ್ತರು; ಶಬರಿಮಲೆ ಮತ್ತೆ ಉದ್ವಿಗ್ನ

ಶಬರಿಮಲೆ: ಇಲ್ಲಿನ ಅಯ್ಯಪ್ಪ ದೇವಾಲಯಲದಲ್ಲಿ ಮತ್ತೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಅಯ್ಯಪ್ಪ ದೇವರ ದರ್ಶನ ಪಡೆಯಲು ಹೊರಟ 11 ಮಹಿಳೆಯರನ್ನು ಭಕ್ತರು ತಡೆದು ನಿಲ್ಲಿಸಿದ್ದಾರೆ.

ಚೆನ್ನೈ ಮೂಲದ ಮನಿಥಿ ಹೆಸರಿನ ಮಹಿಳಾ ಸಂಘಟನೆಯ 11 ಸದಸ್ಯರು ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಹೊರಟಿದ್ದರು. ನೇರ ಮಾರ್ಗದಲ್ಲಿ ತೆರಳಿದರೆ ಅಯ್ಯಪ್ಪ ಭಕ್ತರಿಂದ ತಡೆ ಬೀಳುತ್ತದೆ ಎನ್ನುವ ಕಾರಣಕ್ಕೆ ಕಾಡು ದಾರಿ ಮೂಲಕ ದೇವಾಲಯ ಪ್ರವೇಶಿಸಲು ಮುಂದಾಗಿದ್ದರು. ಆದರೆ, ದೇವಾಲಯದಿಂದ 5 ಕಿ.ಮೀ ದೂರದಲ್ಲೇ ಅವರನ್ನು ತಡೆಯಲಾಯಿತು. ಈ ವೇಳೆ ಅಯ್ಯಪ್ಪ ಭಕ್ತರು ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು.

“ನಾವು ದೇವಾಲಯಕ್ಕೆ ಭೇಟಿ ನೀಡುವವರೆಗೂ ನಮ್ಮ ಪ್ರಯತ್ನ ಹಾಗೂ ಪ್ರತಿಭಟನೆ ಮುಂದುವರಿಯುತ್ತದೆ. ಭದ್ರತಾ ದೃಷ್ಟಿಯಿಂದ ವಾಪಸ್ಸು ತೆರಳುವಂತೆ ಪೊಲೀಸರು ಸೂಚಿಸಿದ್ದಾರೆ. ಆದರೆ ನಾವು ವಾಪಸ್ಸು ತೆರಳುವ ಮಾತೇ ಇಲ್ಲ” ಎಂದು ಮಹಿಳೆಯರು ಹೇಳಿದ್ದಾರೆ.

ಈ ವಿಚಾರ ತಿಳಿಯುತ್ತಿದ್ದಂತೆ ದೇವಸ್ಥಾನದ ಸಮೀಪ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರರುತ್ತಿದ್ದಾರೆ. ಮಹಿಳೆಯರನ್ನು ದೇವಾಲಯಕ್ಕೆ ಹೋಗದಂತೆ ತಡೆಯಲಾಗುತ್ತಿದೆ. ಸದ್ಯ ಈ ಮಹಿಳೆಯರಿಗೆ ಪೊಲೀಸರು ರಕ್ಷಣೆ ನೀಡಿದ್ದಾರೆ. ಹಾಗಾಗಿ ಶಬರಿಮಲೆಯಲ್ಲಿ ಮತ್ತೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗುವ ಲಕ್ಷಣ ಗೋಚರವಾಗಿದೆ.

ಶಬರಿಮಲೆ ದೇವಾಲಯಕ್ಕೆ ಮಹಿಳೆಯರೂ ಪ್ರವೇಶ ಮಾಡಬಹದು ಎಂದು ಸುಪ್ರೀಂಕೋರ್ಟ್​ ತೀರ್ಪು ನೀಡಿತ್ತು. ಇದಾದ ನಂತರದಲ್ಲಿ ಅನೇಕ ಮಹಿಳೆಯರು ದೇವಾಲಯ ಪ್ರವೇಶ ಮಾಡಲು ಮುಂದಾಗಿದ್ದರು. ಆದರೆ, ಅಯ್ಯಪ್ಪ ಭಕ್ತರು ಬೃಹತ್​ ಪ್ರತಿಭಟನೆ ನಡೆಸುವ ಮೂಲಕ ಇದನ್ನು ತಡೆದಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ