ಧಾರ್ಮಿಕ ವಿಚಾರಗಳನ್ನು ಮುಂದಿಟ್ಟು ರಾಜಕೀಯ ಲಾಭ ಪಡೆಯುವುದು ಕಳವಳಕಾರಿ ಬೆಳವಣಿಗೆ: ಡಾ.ಎಲ್.ಹನುಮಂತಯ್ಯ

ಬೆಂಗಳೂರು, ನ.18- ಧಾರ್ಮಿಕ ವಿಚಾರಗಳನ್ನು ಮುಂದಿಟ್ಟು ರಾಜಕೀಯ ಲಾಭ ಪಡೆಯುವ ಪ್ರಯತ್ನ ಅತ್ಯಂತ ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ರಾಜ್ಯ ಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಹೇಳಿದ್ದಾರೆ.

ನಗರದಲ್ಲಿಂದು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿ ಸಭಾಂಗಣದಲ್ಲಿಂದು ಶಾಂತಿ ಪ್ರಕಾಶನ ಹೊರತಂದಿರುವ ಪೈಗಂಬರ್ ಪ್ರವಾದಿ ಮುಹಮ್ಮದ್ ಅವರು ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಧರ್ಮದ ವಿಷಯಗಳನ್ನು ಮುಂದಿಟ್ಟು ಅವುಗಳಿಂದ ಲಾಭ ಪಡೆಯುವ ಪ್ರಯತ್ನ ಇತ್ತೀಚೆಗೆ ನಡೆಯುತ್ತಿದೆ. ಮಹಿಳೆಯರು ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶ ತೀರ್ಪಿನಲ್ಲೂ ರಾಜಕೀಯ ಲಾಭ ಪಡೆಯುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದರು.
ತ್ರಿವಳಿ ತಲಾಖ್ ಮಸೂದೆ ಜಾರಿಗೊಳಿಸುವ ಮೂಲಕ ಅಲ್ಪಸಂಖ್ಯಾತರ ಮಹಿಳೆಯರ ಮತಗಳನ್ನು ಸೆಳೆಯುವ ಸಂಚು ನಡೆಯುತ್ತಿದೆ ಎಂದು ಅವರು ಹೇಳಿದರು.

ಇಂದಿನ ಆಧುನಿಕ ಜಗತ್ತಿನಲ್ಲಿಯೂ ಕೂಡಾ ಮೇಲು- ಕೀಳು ಎಂಬ ವರ್ಗೀಯ, ಜನಾಂಗೀಯ ಅಸಮಾನತೆ, ಲಿಂಗ ತಾರತಮ್ಯಗಳ ಮೂಲಕ ಶೋಷಣೆ ಮಾಡಲಾಗುತ್ತಿದೆ. ಅದು ಸಮಾಜದಲ್ಲಿ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದೆ. ಕ್ರಿಸ್ತಶಕ ಆರನೇ ಶತಮಾನದಲ್ಲೇ ಇಂಥ ಅಸಮಾನತೆಗಳನ್ನು ತೊಡೆದು ಹಾಕಿ ಶೋಷಣೆ ಮುಕ್ತ ಸಮಾಜ ನಿರ್ಮಾಣ ಮಾಡಿರುವ ಮಹಾನ್ ನಾಯಕನಾಗಿ ಪ್ರವಾದಿ ಮುಹಮ್ಮದ್ ಅವರು ಗಮನ ಸೆಳೆಯುತ್ತಾರೆ ಎಂದು ನುಡಿದರು.

ಎಲ್ಲೆಡೆ ಅಧರ್ಮ, ಅನ್ಯಾಯ, ಶೋಷಣೆ ತಾಂಡವವಾಡುತ್ತಿದ್ದ ಕಾಲದಲ್ಲಿ ಅಲ್ಲಾಹನ ಸಂದೇಶವಾಹಕರಾಗಿ ಜನರಿಗೆ ಮರೆತು ಹೋಗಿದ್ದ ನೈಜ ಸಂದೇಶಗಳನ್ನು ಪ್ರಚುರಪಡಿಸಿ, ಇಸ್ಲಾಮ್ ಎಂಬ ಒಂದು ಸಮಗ್ರ ಜೀವನ ವ್ಯವಸ್ಥೆಯನ್ನು ಸ್ಥಾಪಿಸಿದರು. ಅವರ ಜನ್ಮದಿನವನ್ನು ಈದ್ ಮಿಲಾದ್ ಅಥವಾ ಮಿಲಾದುನ್ನಬಿ ಹೆಸರಿನಲ್ಲಿ ಪ್ರವಾದಿ ಸಂದೇಶಗಳನ್ನು ಸಾರಲು ವಿನಿಯೋಗಿಸಲಾಗುತ್ತದೆ ಎಂದು ಹೇಳಿದರು.

ಸಾಹಿತಿ ಶಾಕಿರಾ ಖಾನುಮ್ ಮಾತನಾಡಿ, ಹೆಣ್ಣು ಮಗು ಹುಟ್ಟುವುದೇ ಶಾಪ, ಹೆಣ್ಣು ಮಗುವಿಗೆ ಜನ್ಮ ಕೊಡುವುದೇ ಕಳಂಕ ಎಂಬಂಥ ಕಾಲದಲ್ಲಿ ಮಹಿಳೆಗೂ ಸಮಾನ ಅವಕಾಶ ಸಮಾನ ಗೌರವ ಇರಬೇಕು ಎಂದು ಪ್ರತಿಪಾದಿಸಿ ಮಹಿಳೆಯನ್ನು ಗೌರವಿಸುವ ಸಮಾಜ ನಿರ್ಮಾಣ ಮಾಡಿರುವುದು ಪ್ರವಾದಿ ಮುಹಮ್ಮದ್ ಅವರ ಹೆಗ್ಗಳಿಕೆಯಾಗಿದೆ. ಹಿಂದಿನ ಅರಬ್ಬರಲ್ಲಿ ಹೆಣ್ಣು ಮಗು ಹುಟ್ಟಿದ ತಕ್ಷಣ ಜೀವಂತ ಹೂಳುವ ಪದ್ಧತಿ ಜಾರಿಯಲ್ಲಿತ್ತು. ಹೆಣ್ಣು ಮಗು ಕೂಡಾ ನಿಮ್ಮಂತೆಯೇ ಇರುವ ಮನುಷ್ಯ ಜೀವಿ. ಅದನ್ನು ಪ್ರೀತಿಯಿಂದ ಸಾಕಿ ಸಲಹಿ, ಉತ್ತಮ ಶಿಕ್ಷ ಣ ನೀಡಿ ಬೆಳೆಸುವುದೇ ನಿಮ್ಮ ಮೋಕ್ಷ ದ ದಾರಿ ಎಂದು ಸಾರಿದವರು ಪ್ರವಾದಿ ಮುಹಮ್ಮದ್ ಆಗಿದ್ದಾರೆ ಎಂದು ಹೇಳಿದರು.

ಹೆಣ್ಣು ಅಥವಾ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಹೆಣ್ಣು- ಗಂಡಿನ ಮಧ್ಯೆ ತಾರತಮ್ಯ ಇರಬಾರದು. ಹೆಣ್ಣಿಗೂ ವ್ಯಕ್ತಿತ್ವ, ಅಸ್ತಿತ್ವ ಎಂಬುದಿದೆ. ಆಕೆ ಶಾಪವಲ್ಲ, ಅನುಗ್ರಹ ಎಂಬ ಬೋಧನೆ ಮೂಲಕ ಜನರ ಕಣ್ಣು ತೆರೆಸಿದರು. ನಮಗೂ ಒಂದು ಹೆಣ್ಣು ಹುಟ್ಟಲಿ ಎಂದು ಜನರು ಪ್ರಾರ್ಥಿಸುವಂಥ ಕ್ರಾಂತಿಕಾರಿ ಬದಲಾವಣೆ ತಂದಿರುವುದು ಇತಿಹಾಸ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಎನ್.ಎಸ್.ಶಂಕರ್, ಶಾಂತಿ ಪ್ರಕಾಶನ ಅಧ್ಯಕ್ಷ ಮುಹಮ್ಮದ್ ಅತ್ಹರುಲ್ಲಾ ಶರೀಫ್, ಮುಹಮ್ಮದ್ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ