ಶಿಕ್ಷಣ ಇಲಾಖೆಯ ಆಲ್ಬಂ ಆದ ಮ್ಯೂಸಿಕ್ ಫಾರ್ ಎ ಬ್ರೈಟರ್ ಉಷಾ

ಬೆಂಗಳೂರು, ನ.18- ಉದಯೋನ್ಮುಖ ಗಾಯಕ ಮತ್ತು ಸಂಗೀತ ನಿರ್ದೇಶಕ ಆಶಿಶ್ ಲಕ್ಕಿ ದುಬೆ ಅವರ ಆಶಿಶ್-ಮ್ಯೂಸಿಕ್ ಫಾರ್ ಎ ಬ್ರೈಟರ್ ಉಷಾ ಎಂಬ ವಿನೂತನ ಆಲ್ಬಂ ನ್ನು ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ ತನ್ನ ಇಲಾಖೆಯ ಆಲ್ಬಂ ಆಗಿ ಅಳವಡಿಸಿಕೊಂಡಿದೆ. ಈ ಗೀತೆಗೆ ಗ್ರಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರು ಸಂಗೀತ ನೀಡಿದ್ದಾರೆ.

ಮಕ್ಕಳು ಕೇಂದ್ರಬಿಂದುವಾಗಿರುವುದೆ ಈ ಆಲ್ಬಂನ ವೈಶಿಷ್ಟ್ಯತೆ. ಆಶಿಶ್ ದುಬೆ ಮತ್ತು ಗ್ರಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರು ನಿರ್ಮಿಸಿರುವ ಐದು ಹಾಡುಗಳಲ್ಲಿ ಎರಡು ಕನ್ನಡ ಗೀತೆಗಳಿವೆ. ಮತ್ತೆ ಎರಡು ರೀಮಿಕ್ಸ್ ಮತ್ತು ಒಂದು ಹಾಡು ಇಂಗ್ಲೀಷ್ ಭಾಷೆಯದ್ದಾಗಿದೆ. ಈ ಗೀತೆಗಳು ಎಲ್ಲಾ ಡೌನ್‍ಲೋಡಿಂಗ್ ಮತ್ತು ಸ್ಟ್ರೀಮಿಂಗ್ ವೇದಿಕೆಗಳಲ್ಲಿ ಲಭ್ಯವಿವೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಆಲ್ಬಂ ಅನ್ನು ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಸಂದೇಶಗಳನ್ನು ಸಾರುವ ಮೂಲಕ ಮಕ್ಕಳು ರ್ಯಾಂಪ್ ವಾಕ್ ಮಾಡುವುದರೊಂದಿಗೆ ಸಮಾರಂಭಕ್ಕೆ ಮೆರಗು ತಂದರು.
ಕನ್ನಡದ ಖ್ಯಾತ ನಟ ಪುನೀತ್ ರಾಜ್‍ಕುಮಾರ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ ಹಾಗೂ ಕರ್ನಾಟಕ ಸರ್ಕಾರದ ಪ್ರಧಾನ ಶಿಕ್ಷಣ ಇಲಾಖೆ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಈ ಸಂದರ್ಭದಲ್ಲಿದ್ದರು.

ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು (ಎಸ್ ಡಿ ಜಿ) ಗಮನದಲ್ಲಿಟ್ಟುಕೊಂಡು ಈ ಗೀತೆಗಳನ್ನು ರಚಿಸಲಾಗಿದೆ. ಮಕ್ಕಳ ಶಿಕ್ಷಣದ ಹಕ್ಕು, ಆರೋಗ್ಯ, ಪರಿಸರ ರಕ್ಷಣೆ ಮತ್ತು ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕು, ನೈರ್ಮಲ್ಯ ಹಾಗೂ ಜೀವನ ಶೈಲಿಯ ಆರೋಗ್ಯ ಸೇರಿದಂತೆ ಒಟ್ಟಾರೆ ಮಕ್ಕಳ ಹಿತರಕ್ಷಣೆಗೆ ಪೂರಕವಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಗೀತೆಗಳನ್ನು ರಚಿಸಲಾಗಿದೆ.

ಆಶಿಶ್ ಲಕ್ಕಿ ಅವರು ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆಯಂದು ಸಂಗೀತ ನೀಡಿ ಹಾಡಿರುವ ಇನ್ನೊಂದು ಹಾಡನ್ನು ಕರ್ನಾಟಕ ಶಿಕ್ಷಣ ಇಲಾಖೆ ತನ್ನ ಗೀತೆಯನ್ನಾಗಿ ಅಳವಡಿಸಿಕೊಂಡಿದೆ.

ಮೊದಲ ಬಾರಿಗೆ ಆಶಿಶ್ ಗೀತೆಗಳನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಗೀತೆಗಳನ್ನು ಕೇಳಿದ ಕುಮಾರಸ್ವಾಮಿ ಅವರು ಸಾಮಾಜಿಕ ಕಳಕಳಿ ಇಟ್ಟುಕೊಂಡು ಈ ಗೀತೆಗಳನ್ನು ಹೊರ ತಂದಿರುವ ಆಶಿಶ್ ಅವರ ಕಾರ್ಯವನ್ನು ಶ್ಲಾಘಿಸಿದ್ದರು.
ಈ ಬಗ್ಗೆ ಮಾತನಾಡಿದ ಆಶಿಶ್ ಅವರು, ಸಂಗೀತವೆಂಬುದು ಇಡೀ ವಿಶ್ವಕ್ಕೆ ಆತ್ಮವನ್ನು ನೀಡಿದೆ. ಮನಸಿಗೆ ರೆಕ್ಕೆಯನ್ನು, ಚಿಂತನೆಯನ್ನು ಹಾರುವಂತೆ ಮತ್ತು ಪ್ರತಿಯೊಂದಕ್ಕೂ ಜೀವ ತುಂಬಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ