ಶಬರಿಮಲೆ ದೇವಾಲಯಕ್ಕೆ ಆಗಮಿಸಿದ ತೃಪ್ತಿ ದೇಸಾಯಿ: ವಿಮಾನ ನಿಲ್ದಾಣದಲ್ಲೆ ಪ್ರತಿಭಟನಾಕಾರರಿಂದ ತಡೆ

ಕೊಚ್ಚಿ: ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡುವ ಸಂಬಂಧ ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಇಂದು ಮುಂಜಾನೆ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದಾರೆ, ವಿಮಾನ ನಿಲ್ದಾಣದಲ್ಲಿಯೇ ಪ್ರತಿಭಟನಾಕಾರರು ತೃಪ್ತಿಯನ್ನು ತದೆದಿದ್ದಾರೆ.

ಬೆಳಗ್ಗೆ 4.40ಕ್ಕೆ ಪುಣೆಯಿಂದ ಆಗಮಿಸಿರುವ ತೃಪ್ತಿ ಮತ್ತವರ ತಂಡ ಯಾವುದೇ ಕಾರಣಕ್ಕೂ ವಿಮಾನ ನಿಲ್ದಾಣದಿಂದ ಹೊರಗೆ ಹೋಗಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿರುವುದರಿಂದ ವಿಮಾನ ನಿಲ್ದಾಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಸೆಪ್ಟೇಬರ್ 28 ರಂದು ಕೋರ್ಟ್ ಅಂತಿಮ ತೀರ್ಪು ನೀಡಿದ ನಂತರ ಮೂರನೇ ಬಾರಿಗೆ ಅಯ್ಯಪ್ಪ ದೇವಾಲಯದ ಬಾಗಿಲು ತೆರೆಯಲಾಗುತ್ತಿದೆ.

ಇನ್ನು ತೃಪ್ತಿ ದೇಸಾಯಿ ಶಬರಿಮಲೆ ದೇವಾಲಯ ಪ್ರವೇಶಿಸುವುದಕ್ಕೆ ವಿರೋಧ ವ್ಯಕ್ತ ಪಡಿಸಿರುವ ಏರ್ ಪೋರ್ಟ್ ಟ್ಯಾಕ್ಸಿ ಚಾಲಕರು, ತಾವು ಯಾವುದೇ ಕಾರಣಕ್ಕೂ ತೃಪ್ತಿ ದೇಸಾಯಿ ಶಬರಿಮಲೆ ತೆರಳಲು ಬಿಡವುದಿಲ್ಲ, ತಮ್ಮ ಸ್ವಂತ ವಾಹನದಲ್ಲಿ ಅಥವಾ ಪೊಲೀಸ್ ವಾಹನದಲ್ಲಿ ತೆರಳಲಿ ಎಂದು ಹೇಳಿದ್ದಾರೆ.

ಈ ನಡುವೆ ಹೇಳಿಕೆ ನೀಡಿರುವ ತೃಪ್ತಿ ದೇಸಾಯಿ, ಒಂದು ವೇಳೆ ನಮಗೆ ಭದ್ರತೆ ನೀಡದಿದ್ದರೂ ನಾವು ಅಲ್ಲಿಗೆ ತೆರಳುತ್ತೇವೆ, ನನಗೆ ಈಗಾಗಲೇ ಹಲವು ಬೆದರಿಕೆ ಕರೆಗಳು ಬಂದಿವೆ. ಹೀಗಾಗಿ ನನ್ನ ಮೇಲೆ ದಾಳಿ ನಡೆಯಬಹುದು, ಆದರೆ ಯಾವುದೇ ಕಾರಣಕ್ಕೂ ಅಯ್ಯಪ್ಪ ದರ್ಶನ ಪಡೆಯದೇ ವಾಪಸ್ ಮಹಾರಾಷ್ಟ್ರಕ್ಕೆ ತೆರಳುವುದಿಲ್ಲ ಎಂದು ಹೇಳಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ