ಬೆಂಗಳೂರು, ನ.16- ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗುವ ಸಾಧನ ಸಲಕರಣೆಗಳು ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಶಿಕ್ಷಣದ ಗುಣಮಟ್ಟ ವರ್ಧನೆ ಜತೆಗೆ ಶಾಲೆಗಳ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಲಾಗಿದೆ ಎಂದು ಶಾಸಕ ಎಸ್.ಟ್.ಸೋಮಶೇಖರ್ ತಿಳಿಸಿದ್ದಾರೆ.
ಮಾಗಡಿ ಮುಖ್ಯರಸ್ತೆ ತಾವರೆಕೆರೆ ಗ್ರಾಮದ ಸರ್ಕಾರಿ ಶಾಲಾ ಮಕ್ಕಳಿಗೆ ಸೈಕಲ್ ವಿತರಿಸಿ ಮಾತನಾಡಿದ ಅವರು, ಸಕಾಲದಲ್ಲಿ ವಿದ್ಯಾರ್ಥಿಗಳು ಶಾಲೆಗೆ ತಲುಪಿ, ಕಲಿಕೆಯಲ್ಲಿ ಪ್ರಗತಿ ಸಾಧಿಸಲಿ ಎಂಬ ಸದುದ್ದೇಶದಿಂದ ಸೈಕಲ್ ವಿತರಿಸಲಾಗುತ್ತಿದೆ. ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಹಂತ ಹಂತವಾಗಿ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಇದೇ ವೇಳೆ ಗ್ರಾಮದ ಪಶು ಆಸ್ಪತ್ರೆ ಕಟ್ಟಡ ಹಾಗೂ ಕಾಳಪ್ಪಸ್ವಾಮಿ ಮಠದ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ, ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.
ತಾವರೆಕೆರೆ ಗ್ರಾಪಂ ಅಧ್ಯಕ್ಷೆ ಗಾಳಿಹನುಮಕ್ಕ, ನಗರ ಜಿಪಂ ಸದಸ್ಯ ನರಸಿಂಹಮೂರ್ತಿ, ಮುಖ್ಯ ಶಿಕ್ಷಕಿ ನಾಗರತ್ನಮ್ಮ, ಎಸ್ಡಿಎಂಸಿ ಅಧ್ಯಕ್ಷ ನಾಗೇಶ್, ಪಶುವೈದ್ಯಾಧಿಕಾರಿ ಡಾ.ರಾಜು, ವಿಎಸ್ಎಸ್ಎನ್ ಅಧ್ಯಕ್ಷ ಕೆಂಪೇಗೌಡ, ತಾಪಂ ಸದಸ್ಯೆ ರತ್ಮಮ್ಮ, ಕೆಡಿಪಿ ಸದಸ್ಯ ಚಂದ್ರಶೇಖರ್, ಮುಖಂಡರಾದ ಸಿದ್ದಪ್ಪ, ಮಂಜುನಾಥ್, ಸಿದ್ದರಾಜು ಮತ್ತಿತರರಿದ್ದರು.