ಕೊಚ್ಚಿ: ಅಯ್ಯಪ್ಪನ ದರ್ಶನ ಪಡೆಯದ ಹೊರತು ಕೇರಳದಿಂದ ತೆರಳವುದಿಲ್ಲ ಎಂದು ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಸ್ಪಷ್ಟಪಡಿಸಿದ್ದಾರೆ.
ಶಬರಿಮಲೆಗೆ ತೆರಳಲು ತೃಪ್ತಿ ದೇಸಾಸಿ ಮತ್ತು ಅವರ ತಂಡ ಕೊಚ್ಚಿ ವಿಮಾನ ನಿಲ್ಗಾಣಕ್ಕೆ ಆಗಮಿಸಿದ್ದಾರೆಯಾದರೂ, ವಿಮಾನ ನಿಲ್ದಾಣದ ಹೊರಗೆ ಭಾರಿ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ನೆರೆದಿರುವುದರಿಂದ ತೃಪ್ತಿ ದೇಸಾಯಿ ಮತ್ತು ಅವರ ತಂಡ ವಿಮಾನ ನಿಲ್ದಾಣದಿಂದ ಹೊರಗೆ ಬಂದಿಲ್ಲ. ಮುಂಜಾಗ್ರತಾ ಕ್ರಮವಾಗಿ ಅವರನ್ನು ನಿಲ್ದಾಣದಲ್ಲಿಯೇ ಇರಿಸಿಕೊಳ್ಳಲಾಗಿದೆ.
ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿರುವ ತೃಪ್ತಿ ದೇಸಾಯಿ, ಅಯ್ಯಪ್ಪ ದರ್ಶನ ಪಡೆಯದೇ ಹಿಂತಿರುಗುವುದಿಲ್ಲ ಎಂದು ಹೇಳಿದ್ದಾರೆ. ಪ್ರತಿಭಟನೆಯಿಂದ ನಮ್ಮನ್ನು ಭಯಪಡಿಸಲು ಸಾಧ್ಯವಿಲ್ಲ. ನಾವು ಈಗಾಗಲೇ ಭದ್ರತೆ ಕೋರಿ ಕೇರಳ ಪೊಲೀಸರಿಗೆ ಮನವಿ ಮಾಡಿದ್ದು, ವಿಐಪಿ ಭದ್ರತೆ ನೀಡುವಂತೆ ಮನವಿ ಮಾಡಿಕೊಂಡಿದ್ದೇವೆ ಎಂದಿದ್ದಾರೆ.
ಇನ್ನು ಈ ಬಗ್ಗೆ ಕೊಚ್ಚಿ ಪೊಲೀಸ್ ನಿರ್ದೇಶಕರಿಗೆ ಕರೆ ಮಾಡಿ ಮನವಿ ಮಾಡಲಾಗಿದ್ದು, ಅವರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. ದರ್ಶನಕ್ಕೆ ಆಗಮಿಸುವ ಮಹಿಳೆಯರಿಗೆ ಭದ್ರತೆ ನೀಡುವಂತೆ ಸ್ವತಃ ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಇಲ್ಲಿನ ಪೊಲೀಸರು ಭದ್ರತೆ ಕುರಿತು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೇ ಫೇಸ್ ಬುಕ್ ನಲ್ಲಿಯೂ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Sabarimala,Trupti Desai,Cochin International Airport