ಬೆಂಗಳೂರು, ನ.16- ಕರ್ನಾಟಕ ಕಾಶ್ಮೀರ ಕಾರವಾರ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ, ಗಡಿನಾಡು, ಹೊರನಾಡು ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಇದೇ 24ರಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವತಿಯಿಂದ ಕಾರವಾರ ಬಂದ್ಗೆ ಕರೆ ನೀಡಲಾಗಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಗಡಿ ಜಿಲ್ಲೆಯಾದ ಕಾರವಾರದಲ್ಲಿ ಕೈಗಾರಿಕಾ ಪ್ರದೇಶಗಳು ಹೆಚ್ಚಾಗಿ ಬರಬೇಕು. ಸೀಬರ್ಡ್ ಸ್ಥಾಪನೆಗೆ ಪಡೆದ ಭೂಮಿ ಪರಿಹಾರವನ್ನು ಸರ್ಕಾರ ರೈತರಿಗೆ ಕೊಟ್ಟಿಲ್ಲ. ಅದನ್ನು ನೀಡಬೇಕು. ಕಾರವಾರ ಗಡಿ ಅಭಿವೃದ್ಧಿಗೆ ವಿಶೇಷ ಪ್ಯಾಕೆಜ್ ಘೋಷಿಸಬೇಕೆಂದು ಆಗ್ರಹಿಸಿದರು.
ಡಿ.10ರಂದು ಬೆಳಗಾವಿ ಅಧಿವೇಶನ ಆರಂಭವಾಗಲಿದ್ದು, ಗಡಿನಾಡು, ಹೊರನಾಡು ಸಮಸ್ಯೆಗಳ ಬಗ್ಗೆ ವಿಶೇಷವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಗಡಿನಾಡು ಪ್ರದೇಶಗಳ ಅಭಿವೃದ್ಧಿ ಸರ್ಕಾರ ಈವರೆಗೆ ಏನೇನು ಮಾಡಿದೆ ಎಂಬುದರ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕೆಂದು ವಾಟಾಳ್ ಆಗ್ರಹಿಸಿದರು.
ವೀರೇಂದ್ರಪಾಟೀಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಗಡಿನಾಡ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕೆಂದು ಒತ್ತಾಯಿಸಿದ್ದೆ. ಅದರಂತೆ ಅವರು ಪ್ರಾಧಿಕಾರ ರಚಿಸಿದ್ದರು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಗಡಿನಾಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ವರದಿಯನ್ನು ನೀಡಿದ್ದೆ. ಆ ವರದಿ ಏನಾಯ್ತು ಎಂಬ ಬಗ್ಗೆ ಈವರೆಗೂ ಮಾಹಿತಿ ಇಲ್ಲ.
ಎಲ್ಲ ಸರ್ಕಾರಗಳು ಗಡಿ ನಾಡು ಅಭಿವೃದ್ಧಿ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಾ ಬಂದಿವೆ. ಅಲ್ಲಿನ ಜನ ಸಂಕಷ್ಟದಲ್ಲಿ ಕೈ ತೊಳೆಯುತ್ತಿದ್ದಾರೆ. ವಿಶೇಷವಾಗಿ ಕಾರವಾರದಲ್ಲಿ ಕೈಗಾರಿಕೆಗಳು ಹೆಚ್ಚು ಇಲ್ಲದೆ ಗೋವಾ ಮತ್ತಿತರ ಕಡೆ ವಲಸೆ ಹೋಗುತ್ತಾರೆ.
ಕರ್ನಾಟಕದ ಕಾಶ್ಮೀರವೆಂದೇ ಬಿಂಬಿತವಾಗಿರುವ ಕಾರವಾರದಲ್ಲಿ ಇಂಜನಿಯರಿಂಗ್, ಮೆಡಿಕಲ್ ಕಾಲೇಜು ಸ್ಥಾಪಿಸಿ ವಿವಿಧ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಉದ್ಯೋಗಗಳನ್ನು ನೀಡಬೇಕು. ಈ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇದೇ 24ರಂದು ಕಾರವಾರ ಬಂದ್ ಮಾಡುವ ಮೂಲಕ ಪ್ರತಿಭಟಿಸಲಾಗುವುದು ಎಂದು ಅವರು ಹೇಳಿದರು.