ಲೋಕಸಭಾ ಚುನಾವಣೆಗೂ ಮುನ್ನ ಶಿಕ್ಷಕರ ವರ್ಗಾವಣೆ, ಸಚಿವ ಎನ್.ಮಹೇಶ್

ಬೆಂಗಳೂರು, ನ.16-ಶಿಕ್ಷಕರ ವರ್ಗಾವಣೆಯನ್ನು ಲೋಕಸಭಾ ಚುನಾವಣೆಗೂ ಮುನ್ನವೇ ಮಾಡಬೇಕು, ಆ ಮೂಲಕ ಮತ್ತೊಂದು ವರ್ಷ ವರ್ಗಾವಣೆ ಮುಂದೆ ಹೋಗುವುದನ್ನು ತಪ್ಪಿಸಬೇಕಿದೆ ಎಂದು ಮಾಜಿ ಸಚಿವ ಎನ್.ಮಹೇಶ್ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನಕ್ಕೆ ಚಾಲನೆ ಹಾಗೂ ಉತ್ತಮ ಶಿಕ್ಷಕರಿಗೆ ಸಾವಿತ್ರಿಭಾಯಿ ಫುಲೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಕಳೆದ 10 ವರ್ಷಗಳಿಂದ ಕೋರಿಕೆ ವರ್ಗಾವಣೆಯಾಗದೆ ಶಿಕ್ಷಕರು ಸಾಕಷ್ಟು ತೊಂದರೆಯಲ್ಲಿದ್ದಾರೆ. ವರ್ಗಾವಣೆ ನಿಯಮದಲ್ಲಿ ಬದಲಾವಣೆ ಸಾಧ್ಯವಿಲ್ಲ. ಆದರೆ ಕಳೆದ ಹಲವಾರು ವರ್ಷಗಳಿಂದ ವರ್ಗಾವಣೆಗಾಗಿ ಅರ್ಜಿ ಹಾಕಿಕೊಂಡು ಕಾಯುತ್ತಿದ್ದಾರೆ. ಎಲ್ಲರನ್ನು ಗುರುತಿಸಿ ವರ್ಗಾವಣೆ ಮಾಡುವುದು ತಾಂತ್ರಿಕ ಕಾರಣಗಳಿಂದಾಗಿ ಮುಂದೆ ಹೋಗಿದೆ. ಇದು ನನಗೆ ತುಂಬಾ ನೋವು ತಂದಿದೆ ಎಂದರು.

ಯಾದಗಿರಿಯಲ್ಲಿ 10 ರಿಂದ 12 ವರ್ಷ ಕಾಲ ಕುಟುಂಬ ಬಿಟ್ಟು ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಕೋರಿಕೆ ಶಿಕ್ಷಕರಿಗೆ ಅನುಕೂಲವಾಗುವಂತೆ ವರ್ಗಾವಣೆ ನಡೆಯಬೇಕು. ಲೋಕಸಭಾ ಚುನಾವಣೆ ಬಂದರೆ ಮತ್ತೆ ಇನ್ನೊಂದು ವರ್ಷ ಮುಂದೆ ಹೋಗುತ್ತದೆ. ಹಾಗಾಗಿ ಮೊದಲೇ ವರ್ಗಾವಣೆ ನಡೆಯುವುದು ಸೂಕ್ತ. ನಾನೀಗ ಸಚಿವನಲ್ಲ, ಶಾಸಕನಾಗಿ ಮುಖ್ಯಮಂತ್ರಿಗಳಿಗೆ ಈ ವಿಚಾರದಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ಸರ್ಕಾರಿ ಶಾಲೆ ಮಕ್ಕಳು, ಖಾಸಗಿ ಶಾಲೆ ಮಕ್ಕಳಿಗಿಂತ ಕ್ರಿಯಾಶೀಲರು, ಬುದ್ಧಿವಂತರು, ಸರ್ಕಾರಿ ಶಾಲೆ ಶಿಕ್ಷಕರೂ ಬುದ್ಧಿವಂತರಾಗಿದ್ದು, ಮಕ್ಕಳಿಗೆ ಸ್ಪಂದಿಸುವ ಕೆಲಸ ಮಾಡಿದರೆ ಎಸ್‍ಎಸ್‍ಎಲ್‍ಸಿಯಲ್ಲಿ ಸರ್ಕಾರಿ ಶಾಲೆ ಮಕ್ಕಳು ಶೇ.100ರಷ್ಟು ಫಲಿತಾಂಶ ತರಲು ಸಾಧ್ಯ ಎಂದರು.

ಶಿಕ್ಷಣ ವಿದ್ಯಾರ್ಥಿ ಕೇಂದ್ರಿತವಾಗಿರಬೇಕು. ಹಾಗಾದಾಗ ಮಾತ್ರ ಸರ್ಕಾರಿ ಶಾಲೆಗಳು ಆಧುನಿಕ ಜಗತ್ತಿನ ಪೈಪೆÇೀಟಿ ಎದುರಿಸಲು ಸಾಧ್ಯ. ಪ್ರತಿ ಮಗುವಿನ ಒಳಗಿನ ಸಾಮಥ್ರ್ಯ ಹೊರ ತೆಗೆಯುವ ಮಾಧ್ಯಮವೇ ಶಿಕ್ಷಣ. ಮಾನವ ಸಂಪನ್ಮೂಲ ಅಭಿವೃದ್ಧಿಗೂ ಶಿಕ್ಷಣವೇ ವೇದಿಕೆ ಎಂದು ಪ್ರತಿಪಾದಿಸಿದರು.

ಮಕ್ಕಳಿಗೆ ಸರಿಯಾದ ಪ್ರಾಥಮಿಕ ಶಿಕ್ಷಣ ಕೊಡದಿದ್ದರೆ, ತಾಂತ್ರಿಕ ಮತ್ತು ಆಧುನಿಕ ಜಗತ್ತಿನ ಸೌಲಭ್ಯಗಳು ಕೆಲವೇ ಕೆಲವರಿಗಷ್ಟೇ ಸೀಮಿತವಾಗುತ್ತವೆ. ನಮ್ಮ ಶಾಲೆ ಮಕ್ಕಳಿಗೆ ಎಲ್ಲ ಸೌಲಭ್ಯಗಳು ತಲುಪುವಂತೆ ಶಿಕ್ಷಕರು ಮಾಡಬೇಕಿದೆ ಎಂದರು.

ಮಹಿಳೆಯರು, ಶೋಷಿತ ವರ್ಗದವರ ನಾಲಿಗೆ ಮೇಲೆ ಅಕ್ಷರ ಬರೆದ ಉತ್ತಮ ಶಿಕ್ಷಕರಿಗೆ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಸನ್ಮಾನಿಸಲಾಗಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ