ಬೀದರ, ನ.15: ಸಾಲ ಪಾವತಿಸುವಂತೆ ರಾಷ್ಟ್ರೀಕೃತ ಬ್ಯಾಂಕುಗಳು ನೋಟಿಸ್ ನೀಡಿದಾಗ ಆಂತಕಕ್ಕೊಳಗಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಮಾನ್ಯ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ಅನ್ನದಾತರಿಗೆ ಧೈರ್ಯ ತುಂಬಿದ್ದಾರೆ.
ನ.15ರಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಮತ್ತಿತರ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆದ ಅಖಿಲ ಭಾರತ ಸಹಕಾರ ಸಪ್ತಾಹ-2018 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ರೈತರ 45,000 ಕೋಟಿ ರೂ. ಸಾಲ ಮನ್ನಾ ಆದೇಶ ಹೊರಡಿಸಲಾಗಿದೆ. ಆದರೆ, ಕೆಲವರು ಇಷ್ಟೊಂದು ಹಣವನ್ನು ಎಲ್ಲಿಂದ ಹೊಂದಿಸುತ್ತಾರೆ ಎಂಬ ಸಂಶಯವನ್ನು ರೈತರಲ್ಲಿ ಮೂಡಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ರೈತರು ಆತಂಕಕ್ಕೆ ಒಳಗಾಗಬಾರದು ಎಂದು ಅವರು ತಿಳಿಸಿದರು.
ಹಾಗೆಯೇ ತಮ್ಮ ಸರ್ಕಾರ ಹಳೆಯ ಮೈಸೂರು ಕರ್ನಾಟಕಕ್ಕೆ ಸೀಮಿತ, ಉತ್ತರ ಕರ್ನಾಟಕವನ್ನು ಕಡೆಗಣಿಸಲಾಗುತ್ತಿದೆ ಎಂದು ಕೆಲವರು ಅಪಪ್ರಚಾರ ಮಾಡಲು ಹೊರಟಿದ್ದಾರೆ. ಇಂತಹ ಅಪಪ್ರಚಾರಕ್ಕೆ ಕಿವಿಗೊಟ್ಟು ಸಂಶಯ ಪಡಬೇಡಿ. ಉತ್ತರ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ಜನತೆಗೆ ಹೇಳಿದರು.
ಜಿಲ್ಲೆಯ ಕಾರಂಜಾ ಸಂತ್ರಸ್ತರ ಸಮಸ್ಯೆಯ ಬಗ್ಗೆ ಅರಿವಿದ್ದು, ಈಗಾಗಲೇ ರೈತರನ್ನು ಬೆಂಗಳೂರಿಗೆ ಕರೆಸಿಕೊಂಡು ಚರ್ಚಿಸಲಾಗಿದೆ. ಭೂಮಿ ಕಳೆದುಕೊಂಡವರಿಗೆ ಇನ್ನೂ ಪುನರ್ವಸತಿ ಒದಗಿಸಿಲ್ಲ. ಹಲವಾರು ವರ್ಷಗಳ ನಿಮ್ಮ ಹೋರಾಟಕ್ಕೆ ನ್ಯಾಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಈ ಸಮಸ್ಯೆ ಬಗೆಹರಿಸಲು ವರ್ಷ, ತಿಂಗಳುಗಳು ಕಾಯಬೇಕಾಗಿಲ್ಲ. ನಿಮ್ಮ ನಿರೀಕ್ಷೆಗಿಂತ ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು ಎಂದು ಸಂತ್ರಸ್ತರಿಗೆ ಅಭಯ ನೀಡಿದರು.
ಈ ಭಾಗದಲ್ಲಿ ಯಾವುದೇ ನೀರಾವರಿ ಯೋಜನೆಗಳಿಲ್ಲ. ತ್ವರಿತವಾಗಿ ಶಾಶ್ವತ ನೀರಾವರಿ ಯೋಜನೆ ತರುವ ಮೂಲಕ ಈ ಜಿಲ್ಲೆಯ ಋಣ ತೀರಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು. ಬೀದರ ಜಿಲ್ಲೆ ಸೇರಿದಂತೆ ಹೈದ್ರಾಬಾದ ಕರ್ನಾಟಕದ ನಿರುದ್ಯೋಗ ನಿವಾರಣೆಗೂ ಸರ್ಕಾರ ಕಾರ್ಯಕ್ರಮ ಹಾಕಿಕೊಳ್ಳಲಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.
ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಡವರ ಬಂಧು ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು, ಬೀದಿ ಬದಿ ವ್ಯಾಪಾರಿಗಳಿಗೆ ಪ್ರತಿದಿನ 10 ಸಾವಿರ ರೂ.ಗಳ ವರೆಗೆ ಸಾಲ ನೀಡಲಾಗುವುದು. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು, ಹಾಗೆಯೇ ಸಾಲ ಪಡೆದ ವ್ಯಾಪಾರಿಗಳು ಅದನ್ನು ಹಿಂತಿರುಗಿಸುವ ಮೂಲಕ ಇನ್ನಿತರರಿಗೆ ಅನುಕೂಲಮಾಡಿಕೊಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಕಾರ, ಕೃಷಿ ಮಾರುಕಟ್ಟೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಂಡೆಪ್ಪ ಖಾಶೆಂಪೂರ ಅವರು ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ. ಸಹಕಾರ ಕ್ಷೇತ್ರ ಇಲ್ಲದ ಇಲಾಖೆಗಳಿಲ್ಲ ಎಂದು ವರ್ಣಿಸಿದರು. ಮುಂದಿನ ದಿನಗಳಲ್ಲಿ ಸರ್ಕಾರ ಕಾರಂಜಾ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಒಳ್ಳೆ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ಸಂತ್ರಸ್ತರಿಗೆ ಭರವಸೆ ನೀಡಿದರು.
ಸಹಕಾರ ಧ್ವಜಾರೋಹಣವನ್ನು ನೆರವೇರಿಸಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಕಾರ್ಯಚಟುವಟಿಕೆಗಳ ಕೈಪಿಡಿ ಬಿಡುಗಡೆ ಮಾಡಿದ ಗಣಿ ಮತ್ತು ಭೂವಿಜ್ಞಾನ ಹಾಗೂ ಮುಜರಾಯಿ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ರಾಜಶೇಖರ.ಬಿ ಪಾಟೀಲ್ ಅವರು ಮಾತನಾಡಿ, 1904ರಲ್ಲಿ ಗದಗದ ಕಣಗಿಹಾಳದಲ್ಲಿ ಸಿದ್ದನಗೌಡ ಪಾಟೀಲ್ ಅವರು ಸಹಕಾರ ಸಂಘ ಸ್ಥಾಪನೆ ಮಾಡುವ ಮೂಲಕ ಸಹಕಾರ ಕ್ಷೇತ್ರಕ್ಕೆ ನಾಂದಿ ಹಾಡಿದರು ಎಂದು ಅವರು ತಿಳಿಸಿದರು.
ಬೀದರ ಜಿಲ್ಲೆಯ ಬೀದರ ಸಹಕಾರ ಸಕ್ಕರೆ ಕಾರ್ಖಾನೆಯ ಪುನಶ್ವೇತನಕ್ಕೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, 20 ಕೋಟಿ ರೂ. ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ತಿಳಿಸಿದರು.
ಸಹಕಾರ ವಾರಪತ್ರಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಮೀನುಗಾರಿಕೆ ಹಾಗೂ ಪಶುಪಾಲನಾ ಇಲಾಖೆ ಸಚಿವರಾದ ವೆಂಕಟರಾವ್ ನಾಡಗೌಡ, ಊರಿಗೊಂದು ಶಾಲೆ, ಪಂಚಾಯಿತಿ ಹಾಗೆಯೇ ಸಹಕಾರ ಸಂಘ ಇರಬೇಕು ಎಂಬುವುದು ಗಾಂಧೀಜಿಯವರು ಕನಸು ಕಂಡಿದ್ದರು. ಅದು ಇಂದು ನನಸಾಗಿದೆ ಎಂದು ಅವರು ಹೇಳಿದರು.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಲ್ಲಿ ಹೊಂದಾಣಿಕೆ ಇದ್ದಲ್ಲಿ ಮಾತ್ರ ಸಹಕಾರ ಕ್ಷೇತ್ರ ಪ್ರಗತಿಯಾಗಲು ಸಾಧ್ಯ ಎಂದು ಅವರು ಕಿವಿಮಾತು ಹೇಳಿದರು.
ಭಾಲ್ಕಿ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಈಶ್ವರ.ಬಿ.ಖಂಡ್ರೆ ಅವರು ಮಾತನಾಡಿ, ಕೃಷಿ ಸಹಕಾರಿ ಪತ್ತಿನ ಬ್ಯಾಂಕುಗಳು ಡಿಸಿಸಿ ಬ್ಯಾಂಕಿನ ಬುನಾದಿಗಳು ಎಂದು ಹೇಳಿದರು. ಇವತ್ತು ರಾಜ್ಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕವಾಗಿ ಪ್ರಗತಿ ಸಾಧಿಸಲು ಕಾರಣ ಸಹಕಾರ ಕ್ಷೇತ್ರದ ಕೊಡುಗೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಭಾರತಬಾಯಿ ಶೇರಿಕಾರ, ಲೋಕಸಭಾ ಸದಸ್ಯರಾದ ಭಗವಂತ ಖೂಬಾ, ಶಾಸಕರಾದ ರಹೀಮ ಖಾನ್, ಪ್ರಭು ಚವ್ಹಾಣ್, ಬಿ.ನಾರಾಯಣರಾವ್, ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ, ಡಾ.ಚಂದ್ರಶೇಖರ.ಬಿ.ಪಾಟೀಲ್, ನಗರಸಭೆ ಅಧ್ಯಕ್ಷರಾದ ಶಾಲಿನಿರಾಜು ಚಿಂತಾಮಣಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಡಾ.ಪ್ರಕಾಶ ಪಾಟೀಲ್, ಕರ್ನಾಟಕ ರಾಜ್ಯ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳದ ಅಧ್ಯಕ್ಷರಾದ ಪಂಡಿತರಾವ ಚಿದ್ರಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಉಪಧ್ಯಕ್ಷರಾದ ಎನ್.ಚಂದ್ರಪ್ಪ, ನಿರ್ದೇಶಕರಾದ ಡಾ.ಶೇಖರಗೌಡ ಮಾಲಿಪಾಟೀಲ್, ಜಿಲ್ಲಾ ಸಹಕಾರ ಕೆಂದ್ರ ಬ್ಯಾಂಕ್ ಬೀದರ್ ಹಾಗೂ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಉಮಾಕಾಂತ ನಾಗಮಾರಪಳ್ಳಿ, ಕರ್ನಾಟಕ ರಾಜ್ಯ ಸಹಕಾರ ಮಹಿಳಾ ಮಹಾಮಂಡಳದ ಅಧ್ಯಕ್ಷರಾದ ಶಕುಂತಲಾ ಬೆಲ್ದಾಳೆ, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕರಾದ ಸಿದ್ರಾಮರೆಡ್ಡಿ ಪಾಟೀಲ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಉಪಾಧ್ಯಕ್ಷರಾದ ಭೀಮರಾವ ಪಾಟೀಲ್, ಬೆಂಗಳೂರು ಸಹಕಾರ ಸಂಘಗಳ ನಿಬಂಧಕರಾದ ಎಂ.ಕೆ.ಅಯ್ಯಪ್ಪ, ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಟಿ. ಶ್ರೀಧರ ಸೇರಿದಂತೆ ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಸಹಕಾರ ರತ್ನ ಪ್ರಶಸ್ತಿ ಪ್ರದಾನ: ಇದೇ ಸಂದರ್ಭದಲ್ಲಿ ಸಹಕಾರ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದವರಿಗೆ 2018ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಬೆಂಗಳೂರು ನಗರ ಜಿಲ್ಲೆಯ ಬಿ.ಎನ್.ವೆಂಕಟಾಚಲಯ್ಯ, ತುಮಕೂರಿನ ಅನ್ನಪೂರ್ಣಮ್ಮ ವೆಂಕಟನಂಜಪ್ಪ, ಕೋಲಾರದ ಕೆ.ಶ್ರೀನಿವಾಸಗೌಡ, ಉಡುಪಿಯ ಸರಳಾ.ಬಿ.ಕಾಂಚನ್, ಕೆ.ಕೃಷ್ಣರಾಜ ಸರಳಾಯ, ಹಾಸನದ ಡಾ.ಎ.ಸಿ.ಮುನಿವೆಂಕಟೇಗೌಡ, ಉತ್ತರ ಕನ್ನಡ ಜಿಲ್ಲೆ ಸಿರ್ಸಿಯ ಜಿ.ಟಿ ಹೆಗಡೆ ತಟ್ಟೀಸರ, ಬೀದರ್ನ ಎಂ.ಎ.ಸಲೀಮ್ ಹಾಗೂ ದಿ.ಗುರುಪಾದಪ್ಪ ನಾಗಮಾರಪಳ್ಳಿ(ಮರಣೋತ್ತರ), ಬೆಳಗಾವಿಯ ಎಸ್.ಎಂ.ಕಲೂತಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎನ್.ನಾಗಾಂಬಿಕಾ ದೇವಿ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಎನ್.ಗಂಗಣ್ಣ ಸ್ವಾಗತಿಸಿದರು.